ಸಾಮಾಜಿಕ ಜಾಲತಾಣದಲ್ಲಿ ಜಾಗರೂಕವಾಗಿರುವುದು ಎಷ್ಟು ಮುಖ್ಯವೋ ನಿಮ್ಮ ಗುಪ್ತಪದ(password) ಗೌಪ್ಯವಾಗಿಡುವುದು ಅಷ್ಟೇ ಮುಖ್ಯ. ನಿಮ್ಮ ಇಮೇಲ್, ಆನ್ಲೈನ್ ಬ್ಯಾಂಕಿಂಗ್ ಮತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಖಾತೆಗಳ ಪಾಸ್ವರ್ಡ್ ಗಳು ಅನ್ಯವ್ಯಕ್ತಿಯ ಕೈ ಸೇರಿದರೆ ಆಗಬಹುದಾದ ಅನಾಹುತಗಳು ಊಹಿಸಲಸಾಧ್ಯ.
ನಿಮ್ಮ ಖಾತೆಗಳ ಪಾಸ್ವರ್ಡ್ ಕೇವಲ ನಿಮಗೆ ಮಾತ್ರ ತಿಳಿದಿರಬೇಕು, ನೀವು ಲಾಗಿನ್ ಆಗುವ ಸಂಧರ್ಭದಲ್ಲಿ username ಮತ್ತು password ಹಾಕಿದಾಗ ಆ ಖಾತೆಯ ಮಾಲೀಕ ನೀವೇ ಎಂದು ಖಾತರಿಪಡಿಸಿಕೊಂಡ ನಂತರವಷ್ಟೇ, ಸಂಭಂದಿಸಿದ ಎಲ್ಲಾ ಸೇವೆಗಳು ಲಭ್ಯವಾಗುತ್ತವೆ.
ಆ ವ್ಯಕ್ತಿ ನೀವೇ ಎಂದು ಗುರುತಿಸಿಕೊಳ್ಳಲು ಮುಖ್ಯವಾಗಿ 3 ಬಗೆಗಳಿವೆ. ಮೇಲೆ ಹೇಳಿದಂತೆ username ಮತ್ತು password ನೆನಪಿಟ್ಟುಕೊಳ್ಳುವುದು ಒಂದು ವಿಧ. ನಿಮ್ಮ ಬಳಿ ಇರುವ ಯಾವುದಾದರು ವಸ್ತುವನ್ನು ಉಪಯೋಗಸಿ ಗುರುತಿಸಿಕೊಳ್ಳಬಹುದು ಉದಾಹರಣೆಗೆ ಆಕ್ಸೆಸ್ ಕಾರ್ಡುಗಳು (access cards) ಅಥವಾ ನಿಮ್ಮ ಫೋನ್ ಬಳಸಿ ಅದಕ್ಕೆ ಬರುವ ಕೋಡ್ ಅನ್ನು ಬಳಸಬಹುದು. ಕೊನೆಯದಾಗಿ ನಿಮ್ಮ ಫಿಂಗರ್ ಪ್ರಿಂಟ್(finger print), ರೆಟಿನಾ/ಅಕ್ಷಿಪಟ(retina)ಗಳನ್ನು ಬಳಸಿ ಗುರುತಿಸಬಹುದಾಗಿದೆ.
ಸ್ವಾಭಾವಿಕವಾಗಿ ಈ ಮೂರರಲ್ಲಿ ಯಾವುದಾದರೊಂದು ಬಗೆಯನ್ನು ನಾವು ಬಳಸುತ್ತೇವೆ. ನಿಮ್ಮ username ಮತ್ತು password ಅನ್ಯವ್ಯಕ್ತಿಗೆ ಗೊತ್ತಾದರೆ ಆತ ಸುಲಭವಾಗಿ ನಿಮ್ಮ ಖಾತೆಯನ್ನು ಉಪಯೋಗಿಸಬಹುದು. ಹಾಗೆಯೇ ಕೇವಲ ಫಿಂಗರ್ ಪ್ರಿಂಟ್ ಬಳಸುತ್ತಿದ್ದರೆ ಅದನ್ನು ಕಳುವು ಮಾಡಿ ಅನ್ಯವ್ಯಕ್ತಿ ಬಳಸಬಹುದು. ಕಳೆದ ತಿಂಗಳಲ್ಲಿ ಆದ ಸರಣಿ ಟ್ವಿಟ್ಟರ್ ಖಾತೆ ಗಳ ಹ್ಯಾಕ್ ಒಂದು ಅತ್ಯುತ್ತಮ ಉದಾಹರಣೆ.
ಲೇಖನದ ಮೊದಲಲ್ಲಿ ತಿಳಿಸಿದ ಮೂರು ಬಗೆಯಲ್ಲಿ, ಕನಿಷ್ಠ ಪಕ್ಷ ಎರಡನ್ನು ಜೊತೆಯಾಗಿ ಬಳಸಿದರೆ, ನಿಮ್ಮ ಖಾತೆ ಭದ್ರವಾಗಿರುತ್ತದೆ. ಈ ಪ್ರಕ್ರಿಯೆಗೆ “ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್” ಎಂದೆನ್ನುತ್ತಾರೆ. ಉದಾಹರಣೆಗೆ ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಲು username ಮತ್ತು password ಜೊತೆಗೆ ನಿಮ್ಮ ಫೋನಿಗೆ ಬರುವ OTP(One Time Password) ಆವಶ್ಯಕತೆ ಬಂದರೆ ಕೇವಲ ನೀವು ಮಾತ್ರ ಲಾಗಿನ್ ಆಗಲು ಸಾಧ್ಯವಾಗುತ್ತದೆ. ಅನ್ಯವ್ಯಕ್ತಿ ಗೆ ನಿಮ್ಮ username ಮತ್ತು password ತಿಳಿದಿದ್ದರೂ ಲಾಗಿನ್ ಆಗಲು ನಿಮ್ಮ ಫೋನ್ ಗೆ ಬರುವ OTP ಅವಶ್ಯಕತೆ ಇರುವುದರಿಂದ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.
ಇತ್ತೀಚೆಗೆ ಖ್ಯಾತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನೂ ಹ್ಯಾಕ್ ಮಾಡಿ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಬಳಸಲಾಗಿತ್ತು. ಈಗ ಅಮೆರಿಕಾದ ಚುನಾವಣೆಯಲ್ಲಿ ಇದನ್ನು ತಪ್ಪಿಸಲು ಟ್ವಿಟ್ಟರ್ ಹಲವು ಭದ್ರತಾ ವೈಶಿಷ್ಟ್ಯಗಳನ್ನುಹೊರಬಿಟ್ಟಿದೆ. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ ನಿಮ್ಮ ಆನ್ಲೈನ್ ಒಡನಾಟವನ್ನು ಭದ್ರಪಡಿಸುತ್ತದೆ. ವ್ಯಕ್ತಿಕವಾಗಿ ನಾನು ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ ಬಳಸಲು ಉತ್ತೇಜಿಸುತ್ತೇನೆ.
1 Response
[…] […]