ಟೆಸ್ಲಾದ “ಬ್ಯಾಟರಿ ಡೇ” ಪ್ರಮುಖಾಂಶಗಳು ಹಾಗು 25000 ಡಾಲರ್ ಕಾರ್ ನ ರಹಸ್ಯ (Tesla’s Battery day highlights in Kannada)

Share

ಟೆಸ್ಲಾ ದ ಬ್ಯಾಟರಿ ಡೇ ಕಾರ್ಯಕ್ರಮದಲ್ಲಿ, ಕಂಪನಿಯ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿ ತಂತ್ರಜ್ಞಾನದಲ್ಲಿನ ಹೊಸ ಅನ್ವೇಷಣೆಗಳನ್ನು ಸೇರಿದಂತೆ 25000 ಡಾಲರ್ ಗೆ ಎಲೆಕ್ಟ್ರಿಕ್ ಕಾರ್ ಒಂದನ್ನು ಮಾರುಕಟ್ಟೆಗೆ ತರುವ ಬಗ್ಗೆ ಕಂಪನಿಯ ಸಿ ಇ ಒ ಇಲಾನ್ ಮಸ್ಕ್ ಮತ್ತು ತಂಡದ ಸದಸ್ಯರು ಪ್ರಕಟಿಸಿದರು.

ಬ್ಯಾಟರಿ ತಂತ್ರಜ್ಞಾನದಲ್ಲಿ ಬಳಸುವ ಪದಗಳ ಬಗ್ಗೆ ಸಣ್ಣ ಪರಿಚಯ :

Cost per KWH (Kilo Watt Hour) , 1 KWH ಶಕ್ತಿಯನ್ನು ಸಂಗ್ರಹಿಸಬಲ್ಲ ಬ್ಯಾಟರಿಯನ್ನು ತಯಾರಿಸಲು ಹಾಗು ಅದರ ನಿರ್ವಹಣೆಗೆ ತಗುಲುವ ವೆಚ್ಚ. ಇದು ಕಡಿಮೆಯಾದಷ್ಟು ಇಲೆಕ್ಟ್ರಿಕ್ ವಾಹನಗಳು ,ಪೆಟ್ರೋಲ್ /ಡೀಸೆಲ್ /ಗ್ಯಾಸ್ ವಾಹನಗಳ ಬೆಲೆಗೆ ಸಿಗಲಿವೆ.

ಬ್ಯಾಟರಿಗಳು cellಗಳ ಜೋಡಣೆಯಿಂದ ಮಾಡಲ್ಪಟ್ಟಿರುತ್ತದೆ. ಪ್ರತಿ cell ನಲ್ಲಿ anode (+) ಮತ್ತು cathode(-) ಎಂಬ ಕೊನೆಗಳಿರುತ್ತವೆ. ಇವೆರಡರ ನಡುವೆ ionಗಳು ಚಲಿಸುವ ಮೂಲಕ ಚಾರ್ಜಿಂಗ್ ಮತ್ತು ಡಿಸ್ಚಾರ್ಜಿಂಗ್ ಪ್ರಕ್ರಿಯೆ ನಡೆಯುತ್ತದೆ.

Cost per KWH (Kilo Watt Hour) ಕಡಿಮೆ ಮಾಡಲು ಟೆಸ್ಲಾ ರೂಪಿಸಿರುವ ಯೋಜನೆಗಳು ಹೀಗಿವೆ:

ಹೊಸ cell ವಿನ್ಯಾಸ ಮತ್ತು ಉತ್ಪಾದನಾ ವೇಗ : ಈಗಿನ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿರುವ cellಗಳು ಹಲವಾರು ಬಿಡಿ ಭಾಗಗಳನ್ನು ಹೊಂದಿದ್ದು ಉತ್ಪಾದನೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು . ಹೊಸ ವಿನ್ಯಾಸದಲ್ಲಿ ಬಿಡಿಭಾಗಗಳಿಲ್ಲದ ಕಾರಣ ಉತ್ಪಾದನೆಯ ವೇಗ ಹೆಚ್ಚುತ್ತದೆ. ಈ ವಿನ್ಯಾಸದ cellಗಳನ್ನು ಅವುಗಳ ಅಳತೆಯ ಆಧಾರದ ಮೇಲೆ 46mm X 80mm, 4680 ಎಂದು ಹೆಸರಿಸಲಾಗಿದೆ.

ಈ ವಿನ್ಯಾಸದಿಂದ 6 ಪಟ್ಟು ಹೆಚ್ಚು ಸಾಮರ್ಥ್ಯ ಹಾಗು ಒಂದು ಬಾರಿ ಚಾರ್ಜ್ ಗೆ ಚಲಿಸಬಹುದಾದ ದೂರದಲ್ಲಿ 16% ಹೆಚ್ಚಳವಾಗಲಿದ್ದು, ಇವುಗಳನ್ನು ಟೆಸ್ಲಾ ಕಾರ್ಖಾನೆಯಲ್ಲೇ ಉತ್ಪಾದಿಸುವುದರಿಂದ ಅದಕ್ಕೆ ತಗುಲುವ ವೆಚ್ಚ ಕಡಿಮೆಯಾಗಲಿದೆ. ಒಟ್ಟಾರೆಯಾಗಿ ಇವೆರಡು ಅನ್ವೇಷಣೆಯಿಂದ Cost per KWH 14% ಕಡಿಮೆಯಾಗಲಿದೆ.

4680 ಬ್ಯಾಟರಿ
ಕೃಪೆ :ಟೆಸ್ಲಾ

Cathode(-) : ಇನ್ನು ಮುಂದೆ ಟೆಸ್ಲಾ, ವಾಹನಗಳನ್ನು 3 ವಿಭಾಗಗಳಲ್ಲಿ ತಯಾರಿಸಲಿದ್ದು ದೈನಂದಿನ ಬಳಕೆಗೆ ಉಪಯೋಗಿಸುವ ಕಾರ್ ಗಳಲ್ಲಿ ಕಬ್ಬಿಣದ Cathode ಬಳಸಲಿದೆ. ಹೆಚ್ಚು ಬೆಲೆಬಾಳುವ ಕಾರ್ ಗಳಲ್ಲಿ ನಿಕಲ್ ಮತ್ತು ಮ್ಯಾಂಗನೀಸ್ ಮಿಶ್ರಣದ Cathode ಮತ್ತು ಹೆಚ್ಚು ಭಾರವನ್ನು ಹೊತ್ತೊಯ್ಯುವ ಟೆಸ್ಲಾ ಟ್ರಕ್ ಗಳಿಗೆ ನಿಕಲ್ ನ Cathode ಬಳಸುವ ಬಗ್ಗೆ ಮಾಹಿತಿ ನೀಡಿದೆ.

ಕೋಬಾಲ್ಟ್ ಸ್ಥಿರವಾದ ಲೋಹವಾಗಿದ್ದು ಇದನ್ನು Cathode ಆಗಿ ಬಳಸಬಹುದು, ಆದರೆ ಬೆಲೆ ಹೆಚ್ಚಾದ್ದರಿಂದ ನಿಕಲ್ ಬಳಕೆಗೆ ಪ್ರಾಮುಖ್ಯತೆ ನೀಡಲಾಗುವುದು. ಹೀಗೆ ವಾಹನಗಳ ವಿಂಗಡಣೆ ಮತ್ತು ನಿಕಲ್ ನ ಬಳಕೆಯಿಂದಾಗಿ, 18% Cost per KWH ಕಡಿಮೆಯಾಗುತ್ತದೆ.

Anode (+): ಟೆಸ್ಲಾ ಬ್ಯಾಟರಿಗಳಲ್ಲಿ ಗ್ರ್ಯಾಫೈಟ್ ಅನ್ನು anode ಆಗಿ ಬಳಸಲಾಗುತಿತ್ತು. ಆದರೆ ಸಿಲಿಕಾನ್ ಭೂಮಿಯಲ್ಲಿ ಹೇರಳವಾಗಿ ದೊರೆಯುವುದರಿಂದ ಗ್ರ್ಯಾಫೈಟ್ ಗೆ ಪರ್ಯಾಯವಾಗಿ ಬಳಸಲು ಸಂಶೋಧನೆ ನಡೆಸಿದೆ. ಇದಕ್ಕೆ “ಟೆಸ್ಲಾ ಸಿಲಿಕಾನ್” ಎಂದು ಹೆಸರಿಡಲಾಗಿದೆ. ಟೆಸ್ಲಾ ಸಿಲಿಕಾನ್ ಬಳಸುವುದರಿಂದ 5% Cost per KWH ಕಡಿಮೆಯಾಗುವುದು.

Cellಗಳ ಮರುಬಳಕೆ, cathode ಉತ್ಪಾದನೆಯಲ್ಲಿ ಆವಿಷ್ಕಾರ: ಹಳೆಯ cellಗಳಲ್ಲಿರುವ ಕೋಬಾಲ್ಟ್, ನಿಕಲ್ ಮತ್ತು ಲೀಥಿಯಂಗಳನ್ನು ಮರುಬಳಕೆ ಮಾಡಬಹುದು. ಈ ವಿಧಾನ ಭೂಮಿಯಿಂದ ಅಗೆದು ಪರಿಷ್ಕರಣೆ ಮಾಡುವುದಕ್ಕಿಂತ ಹೆಚ್ಚು ಗುಣಮಟ್ಟದ ಲೋಹಗಳನ್ನು ಕೊಡುತ್ತದೆ ಹಾಗು ಪರಿಸರ ಸ್ನೇಹಿಯಾಗಿದೆ.

ಇದರ ಜೊತೆಗೆ ಟೆಸ್ಲಾ ತನ್ನ ಉತ್ತರ ಅಮೆರಿಕಾದ ಕಾರ್ಖಾನೆಯಲ್ಲಿ ಕ್ಯಾಥೋಡ್ ಗೆ ಸಂಬಂಧಪಟ್ಟಂತೆ ಅನ್ವೇಷಣೆ ನಡೆಸುತ್ತಿದ್ದು ಅಲ್ಲಿಯೇ ಉತ್ಪಾದಿಸುವ ಬಗ್ಗೆ ಚಿಂತನೆ ನಡೆಸಿದೆ. ಇವೆರಡು ಕಾರಣಗಳಿಂದ 7% Cost per KWH ಕಡಿಮೆಯಾಗಲಿದೆ .

ಬ್ಯಾಟರಿ ಜೋಡಣೆ ಮತ್ತು ಹೊಸ ವಿನ್ಯಾಸ: ಕಾರ್ ನ ಬಿಡಿಭಾಗಗಳನ್ನು ಜೋಡಿಸುವ ಹಾಗು ಬ್ಯಾಟರಿ ನಿಯೋಜನೆಯಲ್ಲಿ ಪ್ರಯೋಗ ನಡೆಸಿದ್ದು, ಒಟ್ಟು ಬಿಡಿಭಾಗಗಳು ಕಡಿಮೆಯಾಗಲಿವೆ. ಇವೆರಡರಿಂದ ಒಟ್ಟಾರೆ ಕಾರ್ ನ ತೂಕ 10% ಕಡಿಮೆಯಾಗಲಿದ್ದು, 5% Cost per KWH ಕಡಿಮೆಯಾಗಲಿದೆ.

ಸದ್ಯಕ್ಕೆ 1 KWH ಬ್ಯಾಟರಿ ಉತ್ಪಾದನೆಗೆ ತಗಲುವ ವೆಚ್ಚ 158 ಡಾಲರ್. ಒಟ್ಟಾರೆಯಾಗಿ ಟೆಸ್ಲಾ ಹೂಡಿರುವ ಈ ಯೋಜನೆಗಳು ಫಲಿಸಿದರೆ ಬರೋಬ್ಬರಿ 56% Cost per KWH ಕಡಿಮೆಯಾಗಲಿದೆ. ಇದರ ಪರಿಣಾಮ ಟೆಸ್ಲಾ ಶೀಘ್ರದಲ್ಲಿ 25000 ಡಾಲರ್ ಗೆ ಎಲೆಕ್ಟ್ರಿಕ್ ಕಾರ್ ಒಂದನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದೆ. ಈ ಹಿಂದೆ ಅನೇಕ ಬಾರಿ ಟೆಸ್ಲಾ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಿದೆ. ಟೆಸ್ಲಾ ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂಬುದೇ ಎಲ್ಲರ ಹಾರೈಕೆ.

ಟೆಸ್ಲಾದ ಬ್ಯಾಟರಿ ಡೇ ಸಂಪೂರ್ಣ ವಿಡಿಯೋ