People vector created by pikisuperstar – www.freepik.com
ನಾನು ಈ ಲೇಖನದಲ್ಲಿ ಹೇಳುವ ವಿಷಯಗಳು ಅತಿಶಯೋಕ್ತಿ ಎಂದೆನ್ನಿಸಬಹುದು, ಆದರೆ ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಅರ್ಥವಾಗಬಹುದು ಎಂದುಕೊಂಡಿದ್ದೇನೆ. ಕೊಳ್ಳುಬಾಕ(consumerism) ಸಂಸ್ಕೃತಿ ಜಗತ್ತಿನೆಲ್ಲೆಡೆ ವ್ಯಾಪಿಸಿದ್ದು, ದೇಶದ ಅರ್ಥಿಕ ಬೆಳವಣಿಗೆಯು(ಜಿಡಿಪಿ) ಜನರು ಹೆಚ್ಚು ಹೆಚ್ಚು ವಸ್ತುಗಳನ್ನು ಕೊಂಡುಕೊಳ್ಳುವುದರ ಮೇಲೆ ಅವಲಂಬಿಸಿದೆ.
ಹಿಂದಿನ ದಿನಗಳಲ್ಲಿ ಜಾಹಿರಾತುಗಳು ಕೇವಲ ವಾರ್ತ ಪತ್ರಿಕೆ ಮತ್ತು ದೂರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದವು. ನೀವು ದಿನದ ಕೆಲವು ನಿಮಿಷಗಳು ಮಾತ್ರ ಜಾಹಿರಾತುಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಿರಿ. ಈಗ ನಿಮ್ಮ ಕೈಯಲ್ಲಿರುವ Smartphoneಗಳ ಮೂಲಕ ದಿನದ 24 ಗಂಟೆಯೂ ನಿಮಗೆ ಅರಿವಿಲ್ಲದೆ ಜಾಹಿರಾತುಗಳ ಪ್ರಭಾವಕ್ಕೆ ಒಳಗಾಗುತ್ತಿರುವಿರಿ.
ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಯೌಟ್ಯೂಬ್ ಮತ್ತು ಇತ್ತೀಚೆಗೆ ರದ್ದುಪಡಿಸಲಾದ ಟಿಕ್ ಟಾಕ್ ನಂತಹ ಜಾಲತಾಣ ನಿಮ್ಮನ್ನು ಫೋನಿಗೆ ಅಂಟಿಕೊಂಡಿರುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ವತಃ ಅವುಗಳನ್ನು ಅಭಿವೃದ್ದಿಪಡಿಸಿದ ಇಂಜಿನಿಯರ್ ಗಳೇ ಒಪ್ಪಿಕೊಂಡಿದ್ದಾರೆ. ನೀವು ಹೆಚ್ಚಿನ ಸಮಯವನ್ನು ನಿರ್ದಿಷ್ಟ ಜಾಲತಾಣದಲ್ಲಿ ಕಳೆದಷ್ಟು ಆಯಾ ಕಂಪನಿಗಳಿಗೆ ಹೆಚ್ಚು ಲಾಭದಾಯಕ.
ಹೊಸ ಹೊಸ ಅಪ್ಡೇಟ್ ಗಳು, emojiಗಳು, push notificationsಗಳ ಮೂಲಕ ನಿಮ್ಮನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳ ಆರಂಭಿಕ ಉದ್ದೇಶ ವಿಶ್ವದಲ್ಲಿನ ಮಂದಿ ಒಂದೇ ವೇದಿಕೆಯಲ್ಲಿ ಸಿಗುವಂತಾಗಬೇಕು ಎನ್ನುವುದಾಗಿದ್ದರೂ ಈಗ ಅದು ಪಾತಾಳ ತಲುಪಿದೆ. ಬಳಕೆದಾರರ ಡೇಟಾವನ್ನು ಮನಬಂದಂತೆ ಬಳಸಿ ದುಡ್ಡು ಮಾಡುವ ಗೀಳಿಗೆ ಈ ಕಂಪನಿಗಳು ಇಳಿದುಬಿಟ್ಟಿವೆ.
ಸಾಮಾಜಿಕ ಜಾಲತಾಣಗಳು ಬಳಕೆದಾರರ ದಿನಚರಿಗಳನ್ನು ಆಧರಿಸಿ ಪ್ರತಿಯೊಬ್ಬರಿಗೂ ತನ್ನದೇ ಆದ virtual world(ಭ್ರಮ ಲೋಕ) ಕಟ್ಟಿಕೊಡುತ್ತವೆ. ಉದಾಹರಣೆಗೆ ನೀವು ಕ್ರಿಕೆಟ್ ಪ್ರಿಯರಾಗಿದ್ದಲ್ಲಿ ಕೇವಲ ಕ್ರಿಕೆಟ್ ಗೆ ಸಂಭಂದಿಸಿದ ವಿಡಿಯೋ/ಫೋಟೋಗಳನ್ನು ತೋರಿಸಲಾಗುತ್ತದೆ. ರಾಜಕೀಯ ಆಸಕ್ತರಿಗೆ ಅದರ ಕುರಿತ content ತೋರಿಸಲಾಗುತ್ತದೆ.
ಒಂದು ಉದಾಹರಣೆಯ ಮೂಲಕ ಈ ಕಂಪನಿಗಳು ಹೇಗೆ ವೇಗವಾಗಿ ತಪ್ಪು ಮಾಹಿತಿಯನ್ನು ಪಸರಿಸಿ, ದ್ವೇಷವನ್ನು ಹುಟ್ಟು ಹಾಕುತ್ತವೆ ಎಂದು ತಿಳಿಯೋಣ. ಈ ಹಿಂದೆ ನೀವು ಒಬ್ಬ ರಾಜಕೀಯ ಅಥವಾ ಸಿನಿಮಾ ನಟನ ವಿರುದ್ಧವಿದ್ದ ಒಂದು ಫೇಸ್ಬುಕ್ postಅನ್ನು like ಮಾಡಿರುತ್ತೀರಿ ಎಂದಿಟ್ಟುಕೊಳ್ಳೋಣ. algorithmಗಳು ನೀವು ಇನ್ನಷ್ಟು ಸಮಯ ಫೇಸ್ಬುಕ್ ನಲ್ಲೆ ಕಳೆಯುವಂತೆ ಮಾಡಲು ವ್ಯಕ್ತಿಯ ವಿರುದ್ದವಿರುವ ಎಲ್ಲ postಗಳನ್ನು ನಿಮಗೆ ತೋರಿಸಲಾರಂಭಿಸುತ್ತದೆ.
ಈ ಮೂಲಕ ನಿಮ್ಮ ಮನಸ್ಥಿತಿಯನ್ನೇ ಹೋಲುವ ಹಲವು ಬಳಕೆದಾರರಿಗೆ ಪರಿಚಯಿಸಲ್ಪಡುತ್ತೀರಿ. ಈ ರೀತಿ ದ್ವೇಷ ಅಥವಾ ತಪ್ಪು ಮಾಹಿತಿ ಕಾಡುಗಿಚ್ಚಿನಂತೆ ಪಸರಿಸುತ್ತದೆ. ಸಮೀಕ್ಷೆ ಪ್ರಕಾರ ಟ್ವಿಟ್ಟರ್ ನಲ್ಲಿ ಸುಳ್ಳು ಸುದ್ದಿ ಸತ್ಯಕ್ಕಿಂತ 6 ಪಟ್ಟು ವೇಗದಲ್ಲಿ ಹರಡುತ್ತದೆ.
ಈ ಜಾಲತಾಣಗಳು ಒಂದು ದೇಶದ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿವೆ ಎಂದಾದರೆ ಇವುಗಳು ಜನರ ಮಾನಸಿಕ ಭಾವನೆಗಳನ್ನು ಎಷ್ಟರ ಮಟ್ಟಿಗೆ ತಿರುಚುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಒಂದು ಸಣ್ಣ ವ್ಯಾಪಾರ ಪ್ರಾರಂಭಿಸಲು ಕೂಡ ಕಾನೂನಿನಡಿಯಲ್ಲಿ ಬಹಳಷ್ಟು ರೀತಿ ರಿವಾಜುಗಳಿವೆ ಆದರೆ ನಮ್ಮ ನಿಮ್ಮೆಲ್ಲರ ಡೇಟಾವನ್ನು ಮನಬಂದಂತೆ ಬಳಸುತ್ತಿರುವ ಈ ಕಂಪನಿಗಳಿಗೆ ಕಾನೂನಾತ್ಮಕವಾಗಿ ಯಾವುದೇ ಅಡೆತಡೆಗಳಿಲ್ಲದಿರುವುದು ವಿಪರ್ಯಾಸವೇ ಸರಿ.
ಮೇಲೆ ತಿಳಿಸಲಾದ ವಿಷಯಗಳು ಇತ್ತೀಚಿಗೆ Netflixನಲ್ಲಿ ಬಿಡುಗಡೆಗೊಂಡ “The Social Dilemma” ಸಾಕ್ಷ್ಯ ಚಿತ್ರದಿಂದ ಪ್ರೇರಿತ. ಓದಿದ ನಂತರ ಫೋನಿಗೆ ಅಂಟಿಕೊಂಡೇ ಇರುವ ಸ್ನೇಹಿತರಿಗೆ ಲೇಖನವನ್ನು ಹಂಚಲು ಮರೆಯದಿರಿ.
ನಿಮ್ಮ ಯೋಚನಾ ಲಹರಿಯನ್ನು ಹಳಿ ತಪ್ಪಿಸುವ ಇಂತಹ ಸಾಮಾಜಿಕ ಜಾಲತಾಣಗಳಿದಿಂದ ರಕ್ಷಿಸಿಕೊಳ್ಳಲು ಸಲಹೆಗಳು
1. ಫೋನಿನಲ್ಲಿರುವ ಎಲ್ಲ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್ ಗಳ notifications ನಿಷ್ಕ್ರಿಯಗೊಳಿಸಿ ಅಥವಾ ಸಾದ್ಯವಾದರೆ ಅಪ್ಲಿಕೇಶನ್ ಗಳನ್ನು delete ಮಾಡಿದರೆ ಒಳ್ಳೆಯದು
2. ಬೆಳಗ್ಗೆ ಎದ್ದ ಕೂಡಲೇ ಫೋನ್ ನೋಡುವ ಅಭ್ಯಾಸ ಬದಲಿಸಿಕೊಳ್ಳಿ.
3. ಸುದ್ದಿ ಮತ್ತು ಮಾಹಿತಿಗೆ ವಾರ್ತಾಪತ್ರಿಕೆಗೆ ಆದ್ಯತೆ ಕೊಡಿ.
4. ಪ್ರತಿ ಅಪ್ಲಿಕೇಶನ್ ಗೆ ದಿನಕ್ಕೆ ಇಂತಿಷ್ಟು ಸಮಯ ಎಂದು ಸೀಮಿತಗೊಳಿಸಿ.
5. ಮಲಗುವ 1 ಗಂಟೆಯ ಮುನ್ನ ಫೋನನ್ನು ಬದಿಗಿರಿಸಿಬಿಡಿ.
1 Response
[…] ಮೂಲಕ ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಕೊಳ್ಳುಬಾಕ ಸಂಸ್ಕೃತಿಗೆ […]