ಹೌದು ಭಾರತದ ಉದ್ಯಮ ಒಕ್ಕೂಟ (Confederation of Indian Industry, CII) ಮತ್ತು ಅರ್ನ್ಸ್ಟ್ ಮತ್ತು ಯಂಗ್ (Ernst and Young, EY) ಅವರ ಜಂಟಿ ಸಮೀಕ್ಷೆಯ ಪ್ರಕಾರ ಮುಂದಿನ ದಿನಗಳಲ್ಲಿ ಭಾರತ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು ತನ್ನತ್ತ ಸೆಳೆಯಲಿದೆ.
CII-EY FDI ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ಮೂರರಲ್ಲಿ 2 ಬಹುರಾಷ್ಟ್ರೀಯ ಕಂಪನಿಗಳು ಭವಿಷ್ಯದಲ್ಲಿ ಹೂಡಿಕೆ ಮಾಡುವುದಾದರೆ ಮೊದಲು ಭಾರತವನ್ನು ಆಯ್ದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯ ಸಾಮರ್ಥ್ಯ, ನಿಪುಣ ಕಾರ್ಮಿಕ ವೃಂದ ಮತ್ತು ರಾಜಕೀಯ ಸ್ಥಿರತೆ ಹೂಡಿಕೆಗೆ ಬಲವಾದ ಕಾರಣಗಳಾಗಿವೆ ಎಂದಿದ್ದಾರೆ. ಒಟ್ಟು ಭಾಗವಹಿಸಿದವರಲ್ಲಿ 50% ಕಂಪನಿಗಳು, ಭಾರತ 2025 ರೊಳಗೆ ವಿಶ್ವದ 3 ಪ್ರಮುಖ ಉತ್ಪಾದನಾ ಮತ್ತು ರಫ್ತ್ತುಪ್ರದಾನ ರಾಷ್ಟ್ರಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಜಾರಿಯಾದ ಕಾರ್ಪೊರೇಟ್ ತೆರಿಗೆ ಕಡಿತ, ವ್ಯಾಪಾರ ವಹಿವಾಟುಗಳ ಮತ್ತು ಕಾರ್ಮಿಕ ಕಾನೂನುಗಳ ಸಡಿಲಿಕೆ ಹಾಗು ವಿದೇಶಿ ನೇರ ಹೂಡಿಕೆಯ ಕಾನೂನಿನಲ್ಲಿ ತಂದ ಬದಲಾವಣೆಗಳು, ಹೂಡಿಕೆದಾರರನ್ನು ಆಕರ್ಷಿಸಿವೆ ಎಂದು ಸಮೀಕ್ಷೆ ವರದಿ ಮಾಡಿದೆ.
ಸರ್ಕಾರ ಈ ಎಲ್ಲಾ ಕಾನೂನುಗಳ ತಿದ್ದುಪಡಿ ಮತ್ತು ಸಡಿಲಿಕೆ ಕೇವಲ ಬಂಡವಾಳಶಾಹಿಗಳ ಗಮನದಲ್ಲಿಟ್ಟುಕೊಂಡು ಮಾಡದೆ ರೈತರ ಮತ್ತು ಕಾರ್ಮಿಕರ ನಿಲುವನ್ನು ಪರಿಗಣಿಸಬೇಕೆನ್ನುವುದು ವಿಚಾರವಾದಿಗಳ ವಾದ. ಈಗಾಗಲೇ ನಮ್ಮಲ್ಲಿರುವ ವನಸಿರಿಯು ಕ್ಷೀಣಿಸುತ್ತಿದ್ದು, ಈ ತಿದ್ದುಪಡಿಗಳು ವಿನಾಶಕ್ಕೆ ದೂಡದಂತೆ ನೋಡಿಕೊಳ್ಳುವುದು ಸರ್ಕಾರದ ಮತ್ತು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ.
ಮೂಲ ಸುದ್ದಿ: EY press release