ಡಿಜಿಟಲ್ ಯುಗದಲ್ಲಿ ಗೂಗಲ್ ಇಲ್ಲದೆ ನಮ್ಮ ಜೀವನವನ್ನು ಊಹಿಸಲಸಾದ್ಯ. ಗೂಗಲ್ ತನ್ನ search Engine ಗೆ ಬಹಳಷ್ಟು ಸುಧಾರಣೆಗಳನ್ನು ಕಾಲ ಕಾಲಕ್ಕೆ ತರುತ್ತಿದ್ದು ನಮಗೆ ಬೇಕಾದ ಮಾಹಿತಿ ನಿಖರ ಮತ್ತು ಸಮರ್ಪಕವಾಗಿ ಲಭ್ಯವಾಗಲು ಶ್ರಮಿಸುತ್ತಿದೆ. ಅಕ್ಟೋಬರ್ 15 ರಂದು Search On event ನ ಮೂಲಕ ಸರಣಿ ಅಪ್ಡೇಟುಗಳ ಬಗ್ಗೆ ಗೂಗಲ್ ಮಾಹಿತಿ ನೀಡಿದೆ.
ಪ್ರಮುಖವಾದವನ್ನು ಮಾತ್ರ ಈ ಲೇಖನದಲ್ಲಿ ತಿಳಿಯೋಣ.
ಟೈಪ್ ಮಾಡುವಾಗ ಆದ Spelling ಅವಘಡಗಳು:
ನಾವೆಲ್ಲಾ ಗೂಗಲ್ ನಲ್ಲಿ ಹುಡುಕುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಪದಗಳನ್ನು ತಪ್ಪಾಗಿ ಬರೆದಿರುತ್ತೇವೆ. ಈ ಹಿಂದೆಯೂ ಗೂಗಲ್ ಸರಿಯಾದ ಪದವನ್ನು ವಾಕ್ಯಕ್ಕೆ ಜೋಡಿಸಿ, ವಾಕ್ಯವನ್ನು ಶಿಫಾರಸ್ಸು ಮಾಡುತ್ತಿತ್ತು. ಹೊಸ ಅಪ್ಡೇಟ್ ನಲ್ಲಿ ನೂತನ spelling algorithms ಬಳಸಿದ್ದು ಇದು neural netನ ಸಹಾಯದಿಂದ ತಪ್ಪಾದ ಪದಗಳನ್ನು ಊಹಿಸಲು ಅತಿ ಸುಲಭ ಮಾಡಿದ್ದು ಕೇವಲ 3 ಮಿಲಿ ಸೆಕೆಂಡಿನೊಳಗೆ ಸರಿಯಾದ ವಾಕ್ಯವನ್ನು ಶಿಫಾರಸ್ಸು ಮಾಡಬಲ್ಲದು.

ನಿಖರವಾದ ಪ್ಯಾರಾಗ್ರಾಫುಗಳು:
ಗೂಗಲ್ ನಾವು ಹುಡುಕಿದ ವಾಕ್ಯವಿರುವ ಪೇಜುಗಳನ್ನು ಉತ್ತರವಾಗಿ ನೀಡುತ್ತಿತ್ತು, ಹಾಗು ಬಳಕೆದಾರರಾದ ನಾವು ಪೇಜನ್ನು ಸಂಪೂರ್ಣವಾಗಿ ಓದಿ, ಬೇಕಾದ ಮಾಹಿತಿಯನ್ನು ಕಲೆಹಾಕಬೇಕಿತ್ತು. ಈಗ ಆ ವಾಕ್ಯ ಇರುವ ಪೇಜಿನ ಪ್ಯಾರಾಗ್ರಾಫ್ ಉತ್ತರವಾಗಿ ದೊರೆಯಲಿದೆ.

ಉಪ ವಿಭಾಗಗಳು:
ಹುಡುಕಿದ ವಿಷಯಕ್ಕೆ ಮಾತ್ರ ಸೀಮಿತವಾದ ಪೇಜುಗಳನ್ನು ತೋರಿಸುವುದರ ಜೊತೆಗೆ ಅದಕ್ಕೆ ಸಂಬಂದಿಸಿದ ಪೇಜುಗಳನ್ನು ಸಹ ಗೂಗಲ್ ಇನ್ನು ಮುಂದೆ ತೋರಿಸಲಿದೆ. ಉದಾಹರಣೆಗೆ ನೀವು “ಮನೆಯ ವ್ಯಾಯಾಮ ಸಲಕರಣೆಗಳು” ಎಂದು ಹುಡುಕಿದಲ್ಲಿ ಗೂಗಲ್ ಸಣ್ಣ ಸಲಕರಣೆಗಳು, ಎಲ್ಲ ದರಗಳಲ್ಲಿ ಲಭ್ಯವಿರುವ ಸಲಕರಣೆಗಳನ್ನು ತೋರಬಹುದು. ಇದರಿಂದ ನಮಗೆ ಎಲ್ಲ ಬಗೆಯ ಮಾಹಿತಿ ಲಭ್ಯವಾಗಲಿದೆ.
ನಿರ್ದಿಷ್ಟವಾದ ವಿಡಿಯೋ ತುಣುಕುಗಳ ಶಿಫಾರಸ್ಸು:
ನಿಮ್ಮ ನೆಚ್ಚಿನ ತಂಡದ ಗೆಲುವಿನ ಕ್ಷಣವಾಗಿರಬಹುದು ಅಥವಾ ಸಿನಿಮಾದ climax ದೃಶ್ಯವಾಗಿರಬಹುದು, ಗೂಗಲ್ ಲಭ್ಯವಿರುವ ವಿಡಿಯೋವನ್ನು ತುಂಡರಿಸಿ ನಿಮಗೆ ಬೇಕಾದ ತುಣುಕನ್ನು ತೋರಿಸಬಲ್ಲದು. ಈ algorithm ಈಗಾಗಲೇ testing ಹಂತದಲ್ಲಿದ್ದು ಈ ವರ್ಷದ ಅಂತ್ಯದಲ್ಲಿ ಎಲ್ಲರಿಗು ದೊರೆಯಲಿದೆ.

ಅಂಕಿಅಂಶಗಳ ಹುಡುಕಾಟದಲ್ಲಿನ ಸುಧಾರಣೆ:
ಬಹಳಷ್ಟು ಗೂಗಲ್ search ಗಳಿಗೆ ಅಂಕಿಅಂಶಗಳ ಉತ್ತರ ಅತ್ಯಗತ್ಯ ಹಾಗು ಬಳಕೆದರಿಗೆ ಸುಲಭವಾಗಿ ಅರ್ಥೈಸಲು ಚಾರ್ಟುಗಳ ಬಳಕೆ ಮಾಡಲಿದೆ. ಗೂಗಲ್ 2018 Data Commons Project ಅಡಿಯಲ್ಲಿ ಅಮೇರಿಕಾದ ಜನಗಣತಿ ಮತ್ತು ಮತ್ತು ಕಾರ್ಮಿಕರ ಅಂಕಿಅಂಶಗಳ ಇಲಾಖೆ ಹಾಗು ವಿಶ್ವ ಬ್ಯಾಂಕ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಜೊತೆಗೂಡಿ ಬಹಳಷ್ಟು ಡೇಟಾ ಕಲೆ ಹಾಕಿದ್ದು ಇನ್ನು ಮುಂದೆ ಗೂಗಲ್ ನಲ್ಲಿ ಈ ಬಗ್ಗೆ ಹುಡುಕಿದಾಗ ನಿಖರ ಮಾಹಿತಿ ದೊರೆಯಲಿದೆ.

ಉದಾಹರಣಗೆ ನೀವು ಚಿಕಾಗೋದಲ್ಲಿ ಎಷ್ಟು ಮಂದಿ ದುಡಿಮೆ ಮಾಡುತ್ತಿದ್ದಾರೆ ಎಂದು ಹುಡುಕಿದಲ್ಲಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿ ದೊರೆಯುವುದಲ್ಲದೆ, ಹತ್ತಿರದ ಪಟ್ಟಣಗಳಲ್ಲಿನ ಅಂಕಿ ಅಂಶಗಳನ್ನು ಸಹ ತೋರಿಸಲಾಗುವುದು.
ಗುನುಗುವ ಹಾಡನ್ನು ಪತ್ತೆ ಹಚ್ಚಲಿದೆ ಗೂಗಲ್:
ನಿಮ್ಮ ನೆಚ್ಚಿನ ಚಿತ್ರಗೀತೆ ನೆನಪಿಲ್ಲದೆ ಕೇವಲ ರಾಗ ನೆನಪಿದ್ದರೆ ಸಾಕು ಗೂಗಲ್ ಅಸಿಸ್ಟಂಟ್ ನ ಸಹಾಯದಿಂದ ಕನಿಷ್ಠ 10 ರಿಂದ 15 ಸೆಕೆಂಡ್ ರಾಗವನ್ನು ಗುನುಗಿದರೆ ಗೂಗಲ್ ಅದಕ್ಕೆ ಹೋಲುವಂತ ಹಾಡುಗಳನ್ನು, ವಿಡಿಯೋ ತುಣುಕುಗಳನ್ನು ಊಹಿಸಿ ನಿಮಗೆ ತೋರಿಸಬಲ್ಲದು. ಈಗಾಗಲೇ ಈ ಅಪ್ಡೇಟ್ iOS ನಲ್ಲಿ ಕೇವಲ ಇಂಗ್ಲಿಷ್ ಗೆ ಮಾತ್ರ ಸೀಮಿತವಾಗಿದ್ದು ಆಂಡ್ರಾಯ್ಡ್ ನಲ್ಲಿ ಕನಿಷ್ಠ 20 ಭಾಷೆಗಳಲ್ಲಿ ಲಭ್ಯವಿದೆ.
ಮೂಲ ಸುದ್ದಿ: Search On