ಇಂದು ಭಾರತ ಹೊರಬಾನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಣನೀಯ ಸಾಧನೆ ಮೆರೆದಿದೆ. ಈ ಸಾಧನೆಯ ಹಿಂದೆ ಹಲವಾರು ವಿಜ್ಞಾನಿಗಳ ಶ್ರಮ ಅಡಗಿದೆ. ಅಂತಹ ದಿಗ್ಗಜರಲ್ಲಿ ಪ್ರಮುಖವಾದವರು ಯು.ಆರ್.ರಾವ್.
ಈ ದಿನ 1932 ರಲ್ಲಿ ಜನಿಸಿದ ರಾವ್, ವಿಕ್ರಂ ಸಾರಾಭಾಯ್ ಅಡಿಯಲ್ಲಿ ಕಾಸ್ಮಿಕ್ ವಿಜ್ಞಾನಿ ಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ 1972 ರಿಂದ 1985 ವರೆಗೆ ಬೆಂಗಳೂರಿನಲ್ಲಿರುವ ಇಸ್ರೋ ಉಪಗ್ರಹ ಕೇಂದ್ರ(ISAC) ನಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು. ಭಾರತದಲ್ಲಿ ಉಪಗ್ರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಹೊಣೆ ಹೊತ್ತು ಯಶಸ್ವಿಯಾಗಿ ಭಾರತದ ಮೊದಲ ಉಪಗ್ರಹ ‘ಆರ್ಯಭಟ‘ ಸೇರಿದಂತೆ ಉಳಿದ ೨೦ ಉಪಗ್ರಹಗಳ ಉಡಾವಣೆಗೆ ಕಾರಣವಾದರು.
1984 ರಿಂದ 1994 ವರೆಗೆ ಇಸ್ರೋದ (ISRO) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ರಾವ್, ರಾಕೆಟ್ ತಂತಜ್ಞಾನಕ್ಕೆ ಒತ್ತು ನೀಡಿದರು. ತಮ್ಮ ಕಾಲಘಟ್ಟದಲ್ಲಿ ASLV ರಾಕೆಟ್ ಉಡಾವಣೆ ಮತ್ತು ಭಾರತದ ಮೊದಲ PSLV ರಾಕೆಟ್ ನ ಅಭಿವೃದ್ಧಿ ಹಾಗು ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಲ್ಲದೆ ಹೊರಬಾನು ತಂತ್ರಜ್ಞದಿಂದ ಭಾರತದ ಉನ್ನತಿಗೆ ಶ್ರಮಿಸಿದರು. ಉದಾಹರಣೆಗೆ ಪ್ರಕೃತಿ ವಿಕೋಪಗಳು ಮೊದಲೇ ತಿಳಿಯಲು ಸಂವಹನ ಉಪಗ್ರಹಗಳ ಬಳಕೆ, ಭೂಮಿಯ ವಾತಾವರಣದ ಬಗ್ಗೆ ತಿಳಿಯಲು ಹವಾಮಾನ ಉಪಗ್ರಹಗಳ ಬಳಕೆ ಇತ್ಯಾದಿ.
ಸುಮಾರು 300ಕ್ಕೂ ಹೆಚ್ಚು ವಿಜ್ಞಾನ ಮಾತು ತಂತ್ರಜ್ಞಾನ ಕುರಿತ ಲೇಖನಗಳನ್ನು ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದಾರೆ, ಜೊತೆಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಮುಖವಾದವು , “Perspectives in Communications”, “Space Technology for Sustainable Development”, “India’s Rise as a Space Power” ಮತ್ತು “Space Technology for Sustainable Development”.
ಇವರ ಈ ಎಲ್ಲ ಸಾಧನೆಗೆ ದೇಶ ವಿದೇಶಗಳಿಂದ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಅಮೆರಿಕಾದ “satellite hall of fame” ನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಹೊರಬಾನು ವಿಜ್ಞಾನಿ ಎಂಬುದು ಹೆಮ್ಮೆಯ ಸಂಗತಿ. ಯೂರೊಪ್ ನ ಅತಿ ಹಳೆಯ ವಿಶ್ವವಿದ್ಯಾಲಯವಾದ ಇಟಲಿಯ ಬೊಲ್ಗೊನ ವಿಶ್ವವಿದ್ಯಾಲಯ ರಾವ್ ಗೆ ಗೌರವ D.Sc ನೀಡಿ ಸನ್ಮಾನಿಸಿದೆ. ಜೊತೆಗೆ ಭಾರತ ಸರ್ಕಾರ ರಾವ್ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸಿಗಳನ್ನು ನೀಡುವ ಮೂಲಕ ಗೌರವ ಸೂಚಿಸಿದೆ.
ರಾವ್ 2017 ರಲ್ಲಿ ಕೊನೆಯುಸಿರೆಳೆದರು. ಭಾರತ ಸರ್ಕಾರ 2018 ರಲ್ಲಿ ISRO Satellite centre ಅನ್ನು UR Rao satellite centre ಎಂದು ಮರುನಾಮಕರಣ ಮಾಡುವ ಮೂಲಕ ದಿಗ್ಗಜ ವಿಜ್ಞಾನಿಗೆ ಕೃತಜ್ಞತೆ ಅರ್ಪಿಸಿತು.
9ನೇ ತರಗತಿ ಓದುತ್ತಿದ್ದ ನಾನು 2009 ರಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ ” ವಿದ್ಯಾರ್ಥಿ ವಿಜ್ಞಾನಿ ನೇರ ಸಂವಾದ” ಕಾರ್ಯಕ್ರಮಕ್ಕೆ ಭಾಗವಹಿಸಿ ರಾವ್ ಅವರನ್ನು ಭೇಟಿಯಾದ ಕ್ಷಣವನ್ನು ಎಂದೆಂದೂ ಮರೆಯಲಾರೆ.