ಪುಷ್ಕರ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಾಣದ, ಕಾರ್ತಿಕ್ ಸರಗೂರ್ ನಿರ್ದೇಶನದ ಚಿತ್ರ ‘ಭೀಮಸೇನ ನಳಮಹರಾಜ’ Amazon Original ಸರಣಿಯಲ್ಲಿ ನೇರವಾಗಿ Prime ವಿಡಿಯೋನಲ್ಲಿ ಅಕ್ಟೋಬರ್ 29 ರಂದು ಲಭ್ಯವಾಗಲಿದೆ.
ಪುನೀತ್ ರಾಜಕುಮಾರ್ ಅವರ PRK Productions ಅಡಿಯಲ್ಲಿ ಬಂದ LAW ಮತ್ತು French ಬಿರಿಯಾನಿ ನಂತರ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೊಳ್ಳತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಈಗಿರುವ ಪರಿಸ್ಥಿತಿಯಲ್ಲಿ ಚಿತ್ರ ಮಂದಿರಗಳಿಗೆ ಹೋಗಿ ಸಿನಿಮಾ ನೋಡ ಬಯಸುವವರು ತೀರಾ ಕಡಿಮೆ. ಹಾಗಾಗಿ ನೇರ OTT ಬಿಡುಗಡೆಯಿಂದ ಹೆಚ್ಚಿನ ನೋಡುಗರನ್ನು ತಲುಪಲು ಸಾಧ್ಯವಾಗುತ್ತದೆ.
“ಸಾಂಕ್ರಾಮಿಕ ರೋಗದಿಂದಾಗಿ ಹೊಸ ಸಾಮಾನ್ಯತೆಯನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ‘ಎಲ್ಲರೂ ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ, ಆದರೆ ಯಾರೂ ಸಾಯಲು ಬಯಸುವುದಿಲ್ಲ’ ಎಂಬ ಮಾತಿದೆ. ಪ್ರತಿಯೊಬ್ಬರೂ ದೊಡ್ಡ ಪರದೆಯಲ್ಲಿ ಚಿತ್ರವನ್ನು ನೋಡಬೇಕೆಂದು ನಾನು ಬಯಸುತ್ತೇನೆ, ಆದರೆ ನಾನು ನನ್ನ ಕುಟುಂಬವನ್ನು ಚಿತ್ರಮಂದಿರಕ್ಕೆ ಕರೆದೊಯ್ದು ಅವರ ಸುರಕ್ಷತೆಗೆ ಅಪಾಯವನ್ನುಂಟು ಮಾಡಲು ಬಯಸುವುದಿಲ್ಲ. ಅಲ್ಲದೆ, OTT ಬಿಡುಗಡೆಯು ಎಲ್ಲ ಪ್ರೇಕ್ಷಕರಿಗೆ first day first showದ ಅನುಭವವನ್ನು ನೀಡುತ್ತದೆ”
ಎಂದು ಕಾರ್ತಿಕ್ ಸರಗೂರ್ The Times of India ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಅರವಿಂದ್ ಅಯ್ಯರ್, ಆರೋಹಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೊಂದಿಗೆ ಪ್ರಿಯಾಂಕಾ, ಆಧ್ಯಾ, ಮತ್ತು ಅಚ್ಯುತ್ ಕುಮಾರ್ ಸಹ ತೆರೆ ಹಂಚಿಕೊಂಡಿದ್ದಾರೆ.
ಇನ್ನು ನಿರ್ದೇಶಕರ ಮೊದಲ ಸಿನಿಮಾ ಜೀರ್ಜಿಂಬೆ, 2016 ನೇ ಸಾಲಿನಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.