Dealroom.coನ ಸಂಗ್ರಹಿಸಿದ ಡೇಟಾವನ್ನು ಅಧ್ಯಯನದ ಮಾಡಿದ London & Partners ಬೆಂಗಳೂರನ್ನು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಘೋಷಿಸಿದೆ. ಸಿದ್ದಪಡಿಸಿದ ಪಟ್ಟಿಯಲ್ಲಿ ಲಂಡನ್ ಎರಡನೇ ಸ್ಥಾನ ಪಡೆದಿದ್ದು, ಭಾರತದ ವಾಣಿಜ್ಯ ನಗರಿ ಮುಂಬೈ 6ನೇ ಸ್ಥಾನ ಪಡೆದಿದೆ.
ವರದಿಯ ಪ್ರಕಾರ ಉದ್ಯಾನ ನಗರಿಯಲ್ಲಿ 2016 ರಿಂದ ಇಲ್ಲಿಯವರೆಗೆ ಬಂಡವಾಳ ಹೂಡಿಕೆ 5.5 ಪಟ್ಟು ಹೆಚ್ಚಿದೆ. 2016 ರಲ್ಲಿ 1.3 ಬಿಲಿಯನ್ ಡಾಲರ್ ಹೂಡಿದ್ದ ಬಂಡವಾಳಶಾಹಿಗಳು 2020 ರಲ್ಲಿ 7.2 ಬಿಲಿಯನ್ ಡಾಲರ್ ನಷ್ಟು ಬೆಂಗಳೂರಿನ ಮೇಲೆ ಹೂಡಿದ್ದಾರೆ.

ಮೇಲ್ಕಂಡ ಪಟ್ಟಿಯ ಪ್ರಕಾರ ಲಂಡನ್ ನಲ್ಲಿ ಬಂಡವಾಳ ಹೂಡಿಕೆ 3 ರಷ್ಟು ಮತ್ತು ಮುಂಬೈನಲ್ಲಿ 1.7 ರಷ್ಟು ಹೆಚ್ಚಿದೆ. ನುರಿತ ಹಾಗು ಅಗ್ಗದ ಕಾರ್ಮಿಕ ವೃಂದ, ಬೆಂಗಳೂರಿನ ಹೂಡಿಕೆಗೆ ಬಲವಾದ ಕಾರಣ ಎಂದೆನ್ನಲಾಗುತ್ತಿದೆ.
ಇಷ್ಟೊಂದು ಹಣ ಹೂಡಿಕೆಯಾಗುತ್ತಿದ್ದರೂ ಬೆಂಗಳೂರಿನಲ್ಲಿ ಈಗಲೂ ಹಲವಾರು ಸಮಸ್ಯೆಗಳಿದ್ದು, ಟ್ರಾಫಿಕ್ ಸಮಸ್ಯೆ ಅತಿ ಮುಖ್ಯವಾದದ್ದು. ಹೂಡಿಕೆಯಿಂದ ಸರ್ಕಾರದ ಖಜಾನೆಯೇನೋ ತುಂಬುತ್ತಿದೆ ಆದರೆ ದಿನೇ ದಿನೇ ಬೆಂಗಳೂರಿನ ಹಸಿರು ಕಾಣೆಯಾಗುತ್ತಿದೆ. ಕೆರೆಗಳು ವಿಷ ಕಾರುತ್ತಿವೆ. ನೀರಿನ ಅಭಾವ, ವಾಯು ಮಾಲಿನ್ಯ ಮತ್ತು ಕಸ ವಿಲೇವಾರಿ ಸಮಸ್ಯೆಯಂತೂ ಹೇಳತೀರದು.
ಇನ್ನಾದರೂ ಬಿ.ಬಿ.ಎಂ.ಪಿ. ಹಾಗು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸುವತ್ತ ಚಿಂತಿಸುವಂತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ.
ಮೂಲ ಸುದ್ದಿ: Dealroom.co