Appleನ ಹೊಸ Silicon, M1 ಬಗ್ಗೆ

Share

ಆಪಲ್ ತನ್ನ MAC ಶ್ರೇಣಿಗಳಲ್ಲಿ ಬಳಸುತಿದ್ದ intel ಪ್ರೊಸೆಸರುಗಳ ಬದಲಿಗೆ ARM architecture ಬಳಸಿ ತಯಾರಿಸಿದ ಚಿಪ್ ನ ಮೊರೆಹೋಗಿದೆ. ಈವರೆಗೆ ARM ಆಧಾರಿತ ಪ್ರೊಸೆಸರ್ ಗಳನ್ನು ಮೊಬೈಲುಗಳಲ್ಲಿ ಅಥವಾ ಟ್ಯಾಬ್/ಪ್ಯಾಡ್ ಗಳಲ್ಲಿ ಬಳಸಲಾಗುತ್ತಿತ್ತು, ಇದೀಗ ಡೆಸ್ಕ್ಟಾಪ್ ಕಂಪ್ಯೂಟರ್ ಹಾಗು ಲ್ಯಾಪ್‌ಟಾಪ್ ಗಳಲ್ಲೂ ಬಳಸಿ ಮಾರುಕಟ್ಟೆಯಲ್ಲಿರುವ x86 architecture ನ ಕಾರ್ಯಕ್ಷಮತೆಯನ್ನು ಮೀರಿಸಿದ್ದಾರೆ.

ಮೊದಲಿಗೆ ARM ಮತ್ತು x86 ಗೆ ಇರುವ ವ್ಯತ್ಯಾಸದ ಬಗ್ಗೆ ನೋಡುವುದಾದರೆ ARM RISC(Reduced Instruction Set Computer) ಆಧಾರಿತ ಕಂಪ್ಯೂಟರ್ಗಳು ಕಡಿಮೆ ಸೂಚನೆಗಳಿಂದ ಕಾರ್ಯನಿರ್ವಹಿಸಿದರೆ, x86 CISC(Complex Instruction Set Computer) ಹೆಚ್ಚೆಚ್ಚು ಸೂಚನೆಗಳನ್ನು ಪ್ರೋಸೆಸ್ ಮಾಡುವುದರಿಂದ ಹೆಚ್ಚು ವ್ಯಾಟೇಜ್ ಬೇಕಾಗುತ್ತದೆ. ಆದರೆ ARM ಪ್ರೊಸೆಸ್ಸರ್ ಗಳು ಕಡಿಮೆ ಶಕ್ತಿ ಬಳಸಿಕೊಂಡು, ಬ್ಯಾಟರಿಯಿಂದ ಕೂಡ ತನ್ನ ಕೆಲಸ ಮಾಡುತ್ತದೆ. ARM architecture ಬಳಸಿ ತಯಾರಿಸುತ್ತಿರುವ ಕಂಪನಿಗಳೆಂದರೆ ಆಪಲ್, ಕ್ವಾಲ್ಕಾಮ್, ಸ್ಯಾಮ್ಸಂಗ್ ಮತ್ತು ಹುವಾವೇ. x86 ನ ಪ್ರಮುಖ ತಯಾರಕರು Intel ಮತ್ತು AMD.

ಆಪಲ್ ವೈಯಕ್ತಿಕ ಕಂಪ್ಯೂಟರ್ ಸರಣಿಯಲ್ಲಿ ಬಳಸಿದ ಪ್ರೊಸೆಸರ್ ಗಳ ಇತಿಹಾಸ ಮೆಲಕು ಹಾಕಿದರೆ, PowerPCಯಿಂದ ಶುರುವಾಗಿ, ಕಾರ್ಯಕ್ಷಮತೆ ಹೆಚ್ಚಿದ್ದ ಕಾರಣ intelಗೆ ಬದಲಾಯಿಸಿದರು. 2006 ರಿಂದ intel ಆಧಾರಿತ mac ಗಳನ್ನೇ ನಿರ್ಮಿಸುತಿದ್ದು ಈಗ ತನ್ನ ನಿರೀಕ್ಷೆಯಷ್ಟು ಕಾರ್ಯಕ್ಷಮತೆ ಸಿಗದ ಕಾರಣ ಹೊಸ ಸಿಲಿಕಾನ್ ಚಿಪ್ ಮುಖೇನ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿದಿದೆ. ಈ ಮೊದಲ ಆವೃತ್ತಿಗೆ “M1” ಎಂದು ಹೆಸರಿಸಲಾಗಿದೆ.

ಇಲ್ಲಿಯವರೆಗೆ ಮ್ಯಾಕ್‌ಗೆ ಅದರ ಎಲ್ಲಾ ವೈಶಿಷ್ಟ್ಯಗಳನ್ನು ತಲುಪಿಸಲು ಪ್ರೊಸೆಸರ್, I/O, ಭದ್ರತೆ ಮತ್ತು ಮೆಮೊರಿ ಸೇರಿದಂತೆ ಅನೇಕ ಚಿಪ್‌ಗಳು ಬೇಕಾಗುತ್ತವೆ. M1 ನೊಂದಿಗೆ, ಈ ಘಟಕಗಳನ್ನು ಒಂದೇ ಚಿಪ್ ನ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆ. ಮೊದಲಬಾರಿ 1600 ಕೋಟಿ ಟ್ರಾನ್ಸಿಸ್ಟರ್ ಗಳನ್ನೊಳಗೊಂಡ, 5 ನ್ಯಾನೋಮೀಟರ್ ತಂತ್ರಜ್ಞಾನ ಬಳಸಲಾಗಿದೆ.

Rich result on Google's SERP when searching "apple m1"
ಕೃಪೆ: ಆಪಲ್

CPU ನಲ್ಲಿನ cores ಎಣಿಕೆ 8. ಅದರಲ್ಲಿ 4 high‑performance cores ಮತ್ತು 4 high‑efficiency cores ಎಂದು ವಿಂಗಡಿಸಲಾಗಿದೆ. 8 GPU coreಗಳೊಂದಿಗೆ, M1 ಒಂದು ಸಮಯದಲ್ಲಿ ಸುಮಾರು 25,000 threadಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 16 core ನ್ಯೂರಲ್ ಇಂಜಿನ್ ಜೊತೆಗೆ GPU ಸಹಾಯದಿಂದ machine learning ಕಾರ್ಯ ಅತ್ಯುತ್ತಮಗೊಳಿಸಿದೆ. 8 GB ಮತ್ತು 16 GB ಯ RAM, ಆಂತರಿಕ ಮೆಮೊರಿಗಾಗಿ 2TB ವರೆಗೂ SSD ಸಂಗ್ರಹದ ಆಯ್ಕೆ ಲಭ್ಯವಿದೆ. 

ಇನ್ನು ಬ್ಯಾಟರಿ ಅವಧಿಯಲ್ಲಿ ಉತ್ತಮ ಎನ್ನಬಹುದಾದ ಕಾರ್ಯ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ. Macಗೆಂದೆ ಅಭಿವೃದ್ದಿಪಡಿಸಿದ macOS Big Sur ಅನ್ನು M1 ಪ್ರೊಸೆಸರ್ ಗೆಂದೆ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ. ಸಧ್ಯಕ್ಕೆ ಮೂರು ರೀತಿಯ – M1 ಗೆಂದೆ ಅಭಿವೃದ್ದಿಪಡಿಸಿದ, AppStoreನಲ್ಲಿರುವ, ಹಾಗೂ intel x86 ನಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್ ಗಳನ್ನು ಬಳಸಬಹುದಾಗಿದೆ. x86 ಅಪ್ಲಿಕೇಶನ್ ಗಳನ್ನು Rosetta ಡೈನಾಮಿಕ್ ಬೈನರಿ ಅನುವಾದಕದ ಸಹಾಯದಿಂದ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಆ್ಯಪಲ್ ಈ ವರ್ಷದ ಕೊನೆಯ ಲಾಂಚ್ ಈವೆಂಟ್ One more thing ಎಂಬ ಅಡಿಬರಹದಲ್ಲಿ, ಹೊಸ M1 ಚಿಪ್ ಸಹಿತ 13 ಇಂಚಿನ ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್ ಪ್ರೊ ಮತ್ತು ಮ್ಯಾಕ್‌ ಮಿನಿ ಬಿಡುಗಡೆಗೊಳಿಸಿತು. ಈಗಾಗಲೇ ಈ ಕಂಪ್ಯೂಟರ್ ಗಳು ಆಪಲ್ ಆನ್ಲೈನ್ ಸ್ಟೋರಿನಲ್ಲಿ ಲಭ್ಯವಿವೆ.

ಈಗಾಗಲೇ ಹೊಸ ಪ್ರೊಸೆಸರ್ ಹೊಂದಿರುವ macಗಳಿಗೆ ಹಿಂದಿನ ಆವೃತ್ತಿಯ ಜೊತೆ ಹೋಲಿಸಿ ಸಾಕಷ್ಟು ಸಮೀಕ್ಷೆ, ವಿಮರ್ಶೆಗಳು ಬಂದಿವೆ. ಅದರಲ್ಲಿ ಆಪಲ್ ಈವೆಂಟ್ ನಲ್ಲಿ ಹೇಳಿದ ಅಂಶಗಳು ಎಲ್ಲವು ಸರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ x86 ನಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್ ಗಳನ್ನು M1 ಪ್ರೋಸಸರ್ ಗಳಿಗೆಂದೆ ಅಭಿವೃದ್ದಿಪಡಿಸಿದರೆ ಅದರ ಸಂಪೂರ್ಣ ಉಪಯೋಗವನ್ನು ಮಾಡಿದಂತಾಗುತ್ತದೆ.