ಅಮೆಜಾನ್ ಅಕಾಡೆಮಿ ಹೆಸರಿನೊಂದಿಗೆ ವಿಶ್ವದ ಆನ್ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಭಾರತದ ಉದಯೋನ್ಮುಖ ಕ್ಷೇತ್ರವಾದ Ed Tech ಗೆ ಕಾಲಿಟ್ಟಿದೆ. ಸದ್ಯಕ್ಕೆ ಬೀಟಾ ಹಂತದಲ್ಲಿದ್ದು, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ JEE ಗೆ ಸಿದ್ಧಗೊಳ್ಳಲು ಬೇಕಾದ ಪಠ್ಯಕ್ರಮವನ್ನು ಉಚಿತವಾಗಿ ತನ್ನ ವೆಬ್ಸೈಟ್ ಹಾಗು ಗೂಗಲ್ Playstore ನಲ್ಲಿರುವ ಅಪ್ಲಿಕೇಶನ್ ಮುಖಾಂತರ ನೋಂದಣಿ ಮಾಡಬಹುದಾಗಿದೆ.
ಕೆಲವು ದಿನಗಳ ಹಿಂದೆ ಅಮೆಜಾನ್ ಪ್ರೈಮ್ ವಿಡಿಯೋದ ಕೇವಲ ಮೊಬೈಲ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಮಾತ್ರ ಹೊರಬಿಟ್ಟಿದ್ದು, ಒಟ್ಟಾರೆಯಾಗಿ ಅಮೆಜಾನ್ ಭಾರತದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಲು ಹರಸಾಹಸ ಮಾಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.
JEE ಪೂರ್ವಸಿದ್ದತೆಗೆ ಬೇಕಾದ ತರಬೇತಿ , Mock Test, 15000 ಕ್ಕೂ ಹೆಚ್ಚು ಪ್ರಶ್ನೋತ್ತರಗಳ ಸರಣಿ ಹಾಗು ಪ್ರಾಧ್ಯಾಪಕರೊಂದಿಗೆ ನೇರ ತರಗತಿಗಳು ಸಿಗಲಿವೆ ಎಂದು ಅಕಾಡೆಮಿಯ ಶಿಕ್ಷಣ ನಿರ್ದೇಶಕರು ಅಮೋಲ್ ಗುರ್ವರ ತಿಳಿಸಿದ್ದಾರೆ. ಲಭ್ಯವಿರುವ ಕಲಿಕಾ ಸಾಮಗ್ರಿಗಳು ತಜ್ಞ ಅಧ್ಯಾಪಕರಿಂದ ಸಿದ್ದಗೊಳಿಸಲಾಗಿದ್ದು ಮುಂದಿನ ಕೆಲ ತಿಂಗಳು ಉಚಿತವಾಗಿ ದೊರೆಯಲಿವೆ.
ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೈಜುಸ್(Byjus) ಇತ್ತೀಚೆಗೆ Whitehat Jr ಎಂಬ ಮಕ್ಕಳ ಆನ್ಲೈನ್ ಕೋಡಿಂಗ್ ಕಲಿಕಾ ಸಂಸ್ಥೆಯನ್ನು ತನ್ನ ಒಡೆತನಕ್ಕೆ ಸೇರಿಸಿಕೊಂಡಿತ್ತು ಜೊತೆಗೆ ಆಕಾಶ್ ಶಿಕ್ಷಣ ಸಂಸ್ಥೆಯನ್ನು ಕೊಳ್ಳುವ ಮಾತು ಕೇಳಿಬರುತ್ತಿದೆ.
ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿ ಆಟ ಮತ್ತು ಪಾಠಕ್ಕೆ ಸಮನಾದ ಮಹತ್ವ ನೀಡಬೇಕಾದದ್ದು ಅತ್ಯವಶ್ಯಕ. ನನ್ನ ಅಭಿಪ್ರಾಯದ ಪ್ರಕಾರ ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ, ಆನ್ಲೈನ್ ಶಿಕ್ಷಣದಿಂದ ದೂರ ಉಳಿದು ಶಾಲೆಗಳಿಗೆ ಮಕ್ಕಳನ್ನು ಕಳಿಸುವುದೆ ಲೇಸು ಎಂದೆನಿಸಿದೆ.
ಮೂಲ ಸುದ್ದಿ: ಅಮೆಜಾನ್ ಬ್ಲಾಗ್