ಗುಡ್ಡಗಾಡು ಪ್ರದೇಶ ಹಾಗು ದೊಡ್ಡ ದೊಡ್ಡ ನಗರಗಳಲ್ಲೇ ಕೆಲವು ಬಾರಿ ಫೋನಿನ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತೇವೆ. ನಮಗೆ ನೆಟ್ವರ್ಕ್ ಕಲ್ಪಿಸುವ ಏರ್ಟೆಲ್(Airtel), ಜಿಯೋ(Jio) ಮತ್ತು ವಿಐ(VI) ಕಂಪನಿಗಳಿಗೆ ಶಪಿಸುತ್ತೇವೆ. ಈ ಲೇಖನದಲ್ಲಿ ಫೋನಿನ ಸಿಗ್ನಲ್ ನ ಗುಣಮಟ್ಟದ ಬಗ್ಗೆ ತಿಳಿಯೋಣ.
ಸಾಮಾನ್ಯವಾಗಿ ಫೋನಿನ ನೆಟ್ವರ್ಕ್ ಬಾರ್ ನಲ್ಲಿರುವ ಕಡ್ಡಿಗಳ ಆಧಾರದ ಮೇಲೆ ಸಿಗ್ನಲ್ ಹೇಗಿದೆ ಎಂಬ ನಿರ್ಧಾರಕ್ಕೆ ಬರುತ್ತೇವೆ. ಬಹಳಷ್ಟು ಬಾರಿ ಕಡ್ಡಿಗಳು ಸಿಗ್ನಲ್ ಉತ್ತಮವಾಗಿದೆ ಎಂದು ತೋರುತ್ತಿದ್ದರೂ ಇಂಟರ್ನೆಟ್ ಮತ್ತು ಕರೆಗಳ ಗುಣಮಟ್ಟ ಅಷ್ಟಕ್ಕಷ್ಟೇ ಎನ್ನುವ ಹಾಗಿರುತ್ತದೆ. ಆದ್ದರಿಂದ ನೆಟ್ವರ್ಕ್ ಕಡ್ಡಿಗಳು ಸಿಗ್ನಲ್ ನ ಗುಣಮಟ್ಟದ ನಿಖರವಾದ ಗುಣಮಾಪಕವಲ್ಲ.
ಸಿಗ್ನಲ್ ನ ಗುಣಮಟ್ಟವನ್ನು ಡೆಸಿಬೆಲ್-ಮಿಲಿವಾಟ್ ನಲ್ಲಿ(Decibel-miliwatt /dBm) ಅಳೆಯುತ್ತಾರೆ ಹಾಗು ಇದು ಯಾವಾಗಲು ಋಣಾತ್ಮಕ (Negative) ಆಗಿರುತ್ತದೆ. ಸೊನ್ನೆಗೆ ಹತ್ತರವಿದ್ದಷ್ಟು ಸಿಗ್ನಲ್ ಗುಣಮಟ್ಟದ್ದಾಗಿರುತ್ತದೆ. ಉದಾಹರಣೆಗೆ -100dBm ಮತ್ತು -90dBm ಸಿಗ್ನಲ್ ಗಳಲ್ಲಿ -90dB ಸಿಗ್ನಲ್ ನ ಗುಣಮಟ್ಟ ಹೆಚ್ಚಿದೆ ಎಂದರ್ಥ.
ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ Settings>about phone>Status>SIM status ನಲ್ಲಿರುವ ಸಿಗ್ನಲ್ ಗುಣಮಟ್ಟವನ್ನು(Signal strength) ಕೆಳಗಿನ ಪಟ್ಟಿಯಲ್ಲಿರುವ ಅಂಕಿಗಳಿಗೆ ಹೋಲಿಕೆ ಮಾಡಿ ಹೇಗಿದೆ ಎಂದು ತಿಳಿದುಕೊಳ್ಳಿ.
ಸಿಗ್ನಲ್ ಸ್ಟ್ರೇನ್ತ್ | ಅತ್ಯುತ್ತಮ | ಉತ್ತಮ | ಅಷ್ಟಕ್ಕಷ್ಟೇ | ಕಳಪೆ |
4ಜಿ | -90 dBm ಅಥವಾ ಹೆಚ್ಚು | -91 dBm ರಿಂದ -105dBm | -106 dBm ರಿಂದ -120 dBm | -120 dBm ಕ್ಕಿಂತ ಕಡಿಮೆ |
3ಜಿ | -70 dBm ಅಥವಾ ಹೆಚ್ಚು | -70 dBm ರಿಂದ -85 dBm | -85 dBm ರಿಂದ -100 dBm | -100 dBm ಕ್ಕಿಂತ ಕಡಿಮೆ |
ಇನ್ನು ಮುಂದೆ ಹೊಸ ಸಿಮ್ ಕಾರ್ಡ್ ಅಥವಾ ವೈಫೈ ಡಾಂಗಲ್ ಗಳನ್ನು ಖರೀದಿಸುವ ಮುನ್ನ ನೀವು ವಾಸವಿರುವ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಪೂರೈಕೆದಾರರ ಸಿಗ್ನಲ್ ನ ಗುಣಮಟ್ಟ ಚೆನ್ನಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಕೊನೆಯದಾಗಿ ಕೆಳಗೆ ನೀಡಿರುವ ನನ್ನ ಫೋನಿನ(4ಜಿ) ಸಿಗ್ನಲ್ ಹೇಗಿದೆ ಎಂದು ಹೇಳಬಲ್ಲಿರಾ?
