ಭಾರತಿ ಏರ್ಟೆಲ್ ಮುಂದಿನ ತಲೆಮಾರಿನ ಮೊಬೈಲ್ ಜಾಲವಾದ 5G ಯನ್ನು ಮುತ್ತಿನ ನಗರಿ ಹೈದರಾಬಾದಿನಲ್ಲಿ ಪರೀಕ್ಷಿಸಿದೆ. ಭಾರತದಲ್ಲಿ ನಾವೇ ಮೊದಲು 5G ಸೇವೆಯನ್ನು ರಚಿಸಿ, ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ, ನಮ್ಮದು 5G ಸಿದ್ದ ಜಾಲ ಎಂದು ಹೇಳಿಕೊಂಡಿದೆ.
ಇನ್ನು ಈ ಪರೀಕ್ಷೆಗೆ ಅಸ್ತಿತ್ವದಲ್ಲಿರುವ 4G ಜಾಲ ಸೌಕರ್ಯದ ಮುಖೇನ ಅಂದರೆ ನಾನ್-ಸ್ಟ್ಯಾಂಡ್ ಅಲೋನ್(Non-Stand Alone) ನೆಟ್‌ವರ್ಕ್ ತಂತ್ರಜ್ಞಾನದಿಂದ, ವರ್ಣಪಟಲ(Spectrum)ದ 1800 MHz ಬ್ಯಾಂಡ್ಅನ್ನು ಬಳಸಿದೆ. ಉಪಕರಣವು 1800/2100/2300 MHz ಮತ್ತು SUB-GHz(800/900 MHz) ಬ್ಯಾಂಡ್‌ಗಳೊಂದಿಗೆ ಸಹ ಹೊಂದಿಕೊಳ್ಳುತ್ತದೆ.
ಡೈನಾಮಿಕ್ ಸ್ಪೆಕ್ಟ್ರಮ್ ಶೇರಿಂಗ್ಯೆಂಬ ಆಂಟೆನಾ ತಂತ್ರಜ್ಞಾನ ಸಹಾಯದಿಂದ 4G ಮತ್ತು 5G ಒಂದೇ ಆವರ್ತನ(frequency) ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸುವುದರಿಂದ ಈಗಿರುವ ಜಾಲಗಳಿಂದಲೇ ಸೇವೆಯನ್ನು ಸಮರ್ಪಕವಾಗಿ ನೀಡಬಹುದಾಗಿದೆ.
ಇದನ್ನೆಲ್ಲಾ ಪರಿಗಣಿಸಿದರೆ ಏರ್ಟೆಲ್ 5G ಸೇವೆಯನ್ನು ಕೆಲವೇ ತಿಂಗಳುಗಳಲ್ಲಿ ಹೊರತರಲು ಸಿದ್ದವಾಗಿದೆ ಮತ್ತು 5 ಜಿ ಸ್ಪೆಕ್ಟ್ರಮ್ ಬಳಸಲು ದೂರಸಂಪರ್ಕ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ.
ಪರೀಕ್ಷೆಯ ಸಮಯದಲ್ಲಿ, ಬಳಕೆದಾರರು 5G ನೆಟ್‌ವರ್ಕ್‌ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪೂರ್ಣ ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಯಿತು ಎಂದು ಕಂಪನಿ ಹೇಳುತ್ತಿದೆ. ಆದರೆ ನಿಖರವಾಗಿ ಯಾವುದೇ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ.
4G ಗೆ ಹೋಲಿಕೆ ಮಾಡಿದರೆ lattency(ಡೇಟಾ ಹೊರ ಹೊಳ ಬರಲು ತಗಲುವ ಸಮಯ), ವೇಗದಲ್ಲಿ 10 ಪಟ್ಟು ಮತ್ತು concurrency(ಏಕಕಾಲೀನತೆ: ಒಮ್ಮೆಲೆ ಒಂದಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುವುದು) 100 ರಷ್ಟಿದೆ.
ಈಗಾಗಲೇ ಚರದೂರವಾಣಿಗಳು 5G ತಂತ್ರಜ್ಞಾನ ಒಳಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಅಂತಿಮ ಗ್ರಾಹಕನಿಗೆ ಸಂಪೂರ್ಣ ಅನುಭವ ಪಡೆಯಲು ಇನ್ನಷ್ಟು ಸಮಯ ಬೇಕಾಗುತ್ತದೆ. 2020 ರಲ್ಲೇ ಪ್ರತಿಸ್ಪರ್ಧಿ Jio, ತನ್ನ 5G ಜಾಲ ಸಿದ್ದವಿದೆ ಎಂದು ಹೇಳಿದ್ದರೂ ಈ ವರ್ಷದ ದ್ವಿತೀಯಾರ್ಧದವರೆಗೆ ಕಾಯಬೇಕು.