ಟಾರ್ ಬ್ರೌಸರ್ ಕಾನೂನುಬಾಹಿರವೇ?

Share

ಇಲ್ಲ chancee illa No wayyy. ಆದರೆ, ಇದರರ್ಥ ನೀವು ಟಾರ್ ಅನ್ನು ಡೌನ್‌ಲೋಡ್ ಮಾಡಿ ಏನು ಬೇಕಾದರೂ ಮಾಡಬಹುದು ಎಂದಲ್ಲ. ಅದರಲ್ಲಿ ಹೆಚ್ಚು ವಿಷಯವಿದೆ.

TOR ಎಂದರೇನು ಮತ್ತು ಡಾರ್ಕ್ ವೆಬ್‌ನಲ್ಲಿ ಹೇಗೆ ಸುರಕ್ಷಿತವಾಗಿರಬೇಕು ಎಂಬ ವಿವರಗಳನ್ನು ತಿಳಿದುಕೊಳ್ಳೋಣ.

TOR ಎಂದರೇನು?

ನೀವು ಟಾರ್ ಬಗ್ಗೆ ಕೇಳಿದ್ದರೆ, ಅದನ್ನು ಏಕೆ ಮೊದಲ ಸ್ಥಾನದಲ್ಲಿ ಬಳಸಲಾಗುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಸುದ್ದಿಯಲ್ಲಿರುವ ಡಾರ್ಕ್ ವೆಬ್(dark web) ಅಥವಾ ಡಾರ್ಕ್ನೆಟ್(darknet) ಪದಗಳ ಬಗ್ಗೆ ನೀವು ಕೇಳಿರಬಹುದು.

ಡಾರ್ಕ್ ವೆಬ್, ಡೀಪ್ ವೆಬ್‌(deep web)ನ ಒಂದು ಭಾಗವಾಗಿದೆ.

ಹಾಗಾದರೆ ನೀವು ಕೇಳಬಹುದು ಡೀಪ್ ವೆಬ್ ಯಾವುದು? ಡೀಪ್ ವೆಬ್ ಅಂತರ್ಜಾಲದ ಭಾಗವೇ, ಆದರೆ ಗೂಗಲ್, ಯಾಹೂ ಮತ್ತು ಬಿಂಗ್‌ನಂತಹ ಸಾಂಪ್ರದಾಯಿಕ ಸರ್ಚ್ ಇಂಜಿನ್‌ಗಳಿಂದ ಕಂಡುಹಿಡಿಯಲು ಅಸಾಧ್ಯವಾದುದು ಎನ್ನಬಹುದು.

ಡೀಪ್ ವೆಬ್‌ ವೆಬ್‌ಸೈಟ್‌ಗಳು ಎನ್‌ಕ್ರಿಪ್ಟ್ ಆಗಿರುತ್ತವೆ. ಅವುಗಳನ್ನು ಡೀಕ್ರಿಪ್ಟ್ ಮಾಡಲು ಮತ್ತು ಅದರಲ್ಲಿನ ಮಾಹಿತಿಯನ್ನು ಪಡೆಯಲು ವಿಶೇಷ ತತ್ರಾಂಶದ(ಸಾಫ್ಟ್‌ವೇರ್) ಅಗತ್ಯವಿರುತ್ತದೆ.

ನಾವು ಪ್ರತಿದಿನ ಬ್ರೌಸ್ ಮಾಡುವ ಅಂತರ್ಜಾಲದ ರೀತಿ ಡೀಪ್ ವೆಬ್ ಸಂಪೂರ್ಣವಾಗಿ ಕೇಂದ್ರೀಕೃತವಾಗಿರುವುದಿಲ್ಲ. ಇದು TOR, I2P ನಂತಹ ದೊಡ್ಡ ನೆಟ್‌ವರ್ಕ್‌ಗಳ ಜೊತೆಗೆ ಪೀರ್ ಟು ಪೀರ್, ಫ್ರೆಂಡ್ ಟು ಫ್ರೆಂಡ್‌ನಂತಹ ಸಣ್ಣ ನೆಟ್‌ವರ್ಕ್‌ಗಳನ್ನು ಒಳಗೊಂಡಿದೆ.

TOR ನಲ್ಲಿ, ಈರುಳ್ಳಿಯಲ್ಲಿರುವ ಪದರಗಳಂತೆ ಡೇಟಾವನ್ನು ಪದರಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾಗಿದೆ. ಆದ್ದರಿಂದ ಅದನ್ನು ಡೀಕ್ರಿಪ್ಟ್ ಮಾಡುವ ಬ್ರೌಸರ್‌ನ ಹೆಸರು, The Onion Router.

TOR ಬ್ರೌಸರ್ ಕಾನೂನುಬಾಹಿರವೇ?

ಡೀಪ್ ವೆಬ್‌ನಲ್ಲಿ ಬ್ರೌಸ್ ಮಾಡಲು ಟಾರ್ ಅನ್ನು ಉಪಯೋಗಿಸಿದ ತಕ್ಷಣ, ಇದನ್ನು ಬಳಸುವುದು ಕಾನೂನುಬಾಹಿರ ಎಂದು ನೀವು ಭಾವಿಸಬಹುದು. ಆದರೆ ನೀವು ಇದನ್ನು ಏತಕ್ಕಾಗಿ ಬಳಸುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಬಳಕೆದಾರರನ್ನು ಗುರುತಿಸಲಾಗದಂತೆ ಮಾಡಲು ಬಳಕೆದಾರರ ಐಪಿ ವಿಳಾಸವನ್ನು(IP address) ಎನ್‌ಕ್ರಿಪ್ಟ್ ಮಾಡುವ ಮೂಲಕ TOR ಕಾರ್ಯನಿರ್ವಹಿಸುತ್ತದೆ.

ನೀವು ಹುಡುಕುತ್ತಿರುವುದನ್ನು ಯಾರಿಗೂ ಗೋಚರಿಸದಂತೆ ಮರೆಮಾಚಲು ನಿಮ್ಮ ಡೇಟಾವನ್ನು ವಿವಿಧ ಐಪಿ ಸ್ಥಳಗಳು ಮತ್ತು ರಿಲೇ ಕಂಪ್ಯೂಟರ್‌ಗಳ ಮೂಲಕ ರವಾನಿಸಿ, ನಿಮ್ಮ ಐಪಿ ವಿಳಾಸವನ್ನು ಬೇರೆಡೆಯಿಂದ ಬರುತ್ತಿರುವಂತೆ ಮಾಡುತ್ತದೆ.

TOR ಬ್ರೌಸರ್‌ ಹಾಗು ಡೀಪ್ ವೆಬ್ ಮತ್ತು ಡಾರ್ಕ್ ವೆಬ್ ನ ವೆಬ್‌ಸೈಟ್‌ಗಳು ಒಂದೇ ರೀತಿಯ ಎನ್‌ಕ್ರಿಪ್ಶನ್ ಹೊಂದಿವೆ. ಆದ್ದರಿಂದ TORನಲ್ಲಿ ಡೀಕ್ರಿಪ್ಟ್ ಮಾಡುವುದು ಸುಲಭವಾಗಿದೆ.

ಡೀಪ್ ವೆಬ್ ನಲ್ಲಿ ಕಾನೂನು ದಾಖಲೆಗಳು, ರೋಗಿಗಳ ವೈದ್ಯಕೀಯ ದಾಖಲೆಗಳು ಮತ್ತು ಸಂಸ್ಥೆಯ ನಿರ್ದಿಷ್ಟ ದತ್ತಾಂಶ ಮತ್ತು ಹಣಕಾಸು ದಾಖಲೆಗಳನ್ನು ಒಳಗೊಂಡಿದೆ.

ಮತ್ತೊಂದೆಡೆ ಹೆಸರೇ ಸೂಚಿಸುವಂತೆ ಕಾನೂನುಬಾಹಿರ ಸಂಗತಿಗಳು ನಡೆಯಲು ಡಾರ್ಕ್ ವೆಬ್ ಸೂಕ್ತವಾದ ಸ್ಥಳವಾಗಿಬಿಟ್ಟಿದೆ.

ಈ ವೆಬ್‌ಸೈಟ್‌ಗಳಲ್ಲಿ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ವಸ್ತುಗಳ ಮಾರಾಟ, ನಕಲಿ ಪಾಸ್‌ಪೋರ್ಟ್‌ಗಳ ಮಾರಾಟ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು ಹೀಗೆ ಏನು ಬೇಕಾದರೂ ಸಂಭವಿಸುತ್ತದೆ.

ಈ ರೀತಿಯ ಸೈಟ್‌ಗಳು ಸುರಕ್ಷಿತವಲ್ಲ, ಮತ್ತು ಸರ್ಕಾರಿ ಕಣ್ಗಾವಲಿನಲ್ಲಿ ಇರುತ್ತವೆ. ಇವುಗಳಿಂದ ದೂರವಿರುವುದೇ ಲೇಸು.

ವೆಬ್‌ಸೈಟ್‌ಗಳನ್ನು ಬೇರೆ ಬೇರೆ ವಿಭಾಗದಲ್ಲಿ ಬೇರ್ಪಡಿಸುವ ಗುಪ್ತ ವಿಕಿಯಂತಹ ಡೈರೆಕ್ಟರಿಗಳ ಮೂಲಕ ನೀವು ಡೀಪ್ ವೆಬ್‌ ಅನ್ನು ಬ್ರೌಸ್ ಮಾಡಬಹುದು. TOR ಅನ್ನು ಬಳಸುವುದು ಕಾನೂನುಬಾಹಿರವಲ್ಲ, ಅದರಲ್ಲಿ ಆಗುವ ಕಾನೂನುಬಾಹಿರ ಚಟುವಟಿಕೆಗಳು ಶಿಕ್ಷಾರ್ಹ ಅಪರಾಧವಾಗಿದೆ.

TOR ಬ್ರೌಸರ್ ಏಕೆ ಬಳಸಬೇಕು?

ಡಾರ್ಕ್ ವೆಬ್ ಅನೇಕ ಪ್ರಯೋಜನಗಳನ್ನು ಹೊಂದಿದೆ.ಇದರ ನೈತಿಕ ಬಳಕೆಯು ಯಾವುದೇ ಡಿಜಿಟಲ್ ಹೆಜ್ಜೆಗುರುತನ್ನು ಬಿಡದೆ ಆನ್‌ಲೈನಿನಲ್ಲಿ ಸಂವಹನ ಮಾಡಲು ಸಹಕಾರಿಯಾಗಿದೆ.

ಇಂಟರ್ನೆಟ್ ಬಳಕೆದಾರನಾಗಿ, TOR ಅನ್ನು ಬಳಸುವುದರಿಂದ ನಿಮ್ಮ ಹುಡುಕಾಟಗಳು ಲಾಗ್ ಆಗದ ಕಾರಣ Googleನಿಂದ ಬರುವ ಉದ್ದೇಶಿತ ಜಾಹೀರಾತುಗಳಿಂದ ಮತ್ತು ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಬೇರೆ ಕಂಪನಿಗಳಿಗೆ ಹಂಚಿಕೊಳ್ಳದಂತೆ ತಪ್ಪಿಸಬಹುದು.

ಹೆಚ್ಚು ಸೆನ್ಸಾರ್ ಮಾಡಿದ ದೇಶಗಳಲ್ಲಿ ಕೆಲಸ ಮಾಡುತ್ತಿರುವ ರಾಜಕೀಯ ಶಿಳ್ಳೆಗಾರರು(Whistleblowers), ಕಾರ್ಯಕರ್ತರು ಮತ್ತು ಪತ್ರಕರ್ತರು ತಮ್ಮ ಸ್ಥಳ ಅಥವಾ ಗುರುತನ್ನು ಬಿಟ್ಟುಕೊಡದೆ ತಮ್ಮ ಪರಿಸ್ಥಿತಿ, ಸಂಶೋಧನೆ ಮತ್ತು ನಿಲುವುಗಳನ್ನು ಹೊರಗಿನ ಪ್ರಪಂಚಕ್ಕೆ ಹಂಚಿಕೊಳ್ಳಲು ಉಪಕಾರಿಯಾಗಿದೆ.

ಚೀನಾ ಮತ್ತು ಇರಾನ್ ನಂತಹ ದೇಶಗಳಲ್ಲಿ ಕೆಲವು ವೆಬ್ಸೈಟುಗಳ ಮೇಲೆ ನಿರ್ಬಂಧನೆ ಇರುವುದರಿಂದ, .onion ಸೈಟ್ ಮೂಲಕ ಆ ದೇಶದ ನಾಗರಿಕರಿಗೆ ವಿಶ್ವದ ಇತರ ಭಾಗಗಳೊಂದಿಗೆ ಮುಕ್ತವಾಗಿ ಸಂಪರ್ಕಿಸಲು ಅವಕಾಶವಾಗಿದೆ.

TOR ಅನ್ನು ಬಳಕೆದಾರರ ಅನಾಮಧೇಯತೆಯನ್ನು ಗುರಿಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಆದರೆ ನೀವು ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳಲ್ಲಿ ಡೀಪ್ ವೆಬ್‌ ಅನ್ನು ಬ್ರೌಸ್ ಮಾಡುತ್ತಿರುವಾಗ, VPN ಬಳಸುವುದನ್ನು ಖಚಿತಪಡಿಸಿಕೊಳ್ಳಿ.

TOR ನಲ್ಲಿ ಏನು ಮಾಡಬಾರದು?

ಮೊದಲೇ ಹೇಳಿದಂತೆ, ಡಾರ್ಕ್ ವೆಬ್ ಕೂಡ ಡೀಪ್ ವೆಬ್‌ನ ಒಂದು ಭಾಗವಾಗಿದೆ, ಇದರಲ್ಲಿ drugs ಗಳನ್ನು ಮಾರಾಟ ಮಾಡುವುದು, ಹ್ಯಾಕರ್‌ಗಳನ್ನು ಹುಡುಕಿ ಅಹಿತಕರ ಘಟನೆಗಳ ಸಂಚು ರೂಪಿಸುವುದು, ಕದ್ದ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಇತರರಿಗೆ ಮಾರುವುದು ಹೀಗೆ ಸಾಕಷ್ಟು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಅಕ್ರಮ ಉದ್ದೇಶಗಳಿಗಾಗಿ ಡಾರ್ಕ್ ವೆಬ್ ಅನ್ನು ಬಳಸುತ್ತಿರುವವರನ್ನು ಕಂಡುಹಿಡಿಯಲು ಸೈಬರ್ ಅಧಿಕಾರಿಗಳು ಡೀಪ್ ವೆಬ್‌ನಲ್ಲಿ ಜಾಲ ಬೀಸಿರುತ್ತಾರೆ. ಆದ್ದರಿಂದ ನಿಮ್ಮ ಗೌಪ್ಯತೆಗೆ ಮಾತ್ರ ಟಾರ್ ಅನ್ನು ಬಳಸುವುದು ಉತ್ತಮ.

TOR ಬಳಸುವಾಗ ಸುರಕ್ಷಿತವಾಗಿರಲು ಮಾರ್ಗಸೂಚಿಗಳು

  • ನೀವು ಹೇಗೆ ಬ್ರೌಸ್ ಮಾಡುತ್ತೀರಿ ಎಂಬುದನ್ನು ಬದಲಾಯಿಸಿ: TOR ಎನ್ನುವುದು ಫೈರ್‌ಫಾಕ್ಸ್(Firefox) ಬ್ರೌಸರ್‌ನ ಒಂದು ಆವೃತ್ತಿಯಾಗಿದೆ ಮತ್ತು ಇದು ಡಕ್‌ಡಕ್‌ಗೋ(DuckDuckGo) ಸರ್ಚ್ ಎಂಜಿನ್‌ನೊಂದಿಗೆ ಬರುವುದರಿಂದ ಗೌಪ್ಯತೆಗೆ ಪ್ರಾಮುಖ್ಯತೆ ನೀಡುತ್ತದೆ. ಇಲ್ಲಿ ನಿಮ್ಮ ಯಾವುದೇ ಹುಡುಕಾಟಗಳು ಸೇವ್ ಮಾಡಲಾಗುವುದಿಲ್ಲ. ನಿಮ್ಮ ಮಾಹಿತಿ ಸೋರಿಕೆಯಾಗಬಹುದಾದ ಕಾರಣ ಅನಗತ್ಯ ಬ್ರೌಸರ್ ಎಕ್ಸಟೆನ್ಶನ್ ಇನ್ಸ್ಟಾಲ್ ಮಾಡಬೇಡಿ.
  • ಯಾವಾಗಲೂ https:// ಲಿಂಕುಗಳನ್ನೇ ಬಳಸಿ: TORನಲ್ಲಿ ಲಭ್ಯವಿರುವಾಗಲೆಲ್ಲಾ ವೆಬ್‌ಸೈಟ್‌ಗಳ https:// ಆವೃತ್ತಿಗೆ ಕರೆದೊಯ್ಯುತ್ತದೆ. ಆದರೂ ನಿಮ್ಮ ಬ್ಯಾಂಕ್ ಖಾತೆ ಸಂಬಂಧ ವಹಿವಾಟು ಮಾಡುವಾಗ ಒಮ್ಮೆ ಸುರಕ್ಷಿತವಾಗಿದೆಯೇ ಎಂದು ಪರೀಕ್ಷಿಸಿ ಮುಂದುವರಿಯುವುದು ಉತ್ತಮ.
  • ಬ್ರೌಸಿಂಗ್ ನಿಧಾನವಾಗಿಸಲಿದೆ: ನೀವು ಪ್ರವೇಶಿಸುತ್ತಿರುವ ವೆಬ್‌ಸೈಟ್‌ಗೆ TOR ನೇರವಾಗಿ ಸಂಪರ್ಕಿಸುವುದಿಲ್ಲ. ನಿಮ್ಮ ಗುರುತನ್ನು ಮರೆಮಾಚಲು ಅದು TOR ನೆಟ್‌ವರ್ಕ್‌ನಲ್ಲಿ ಬಹಳಷ್ಟು ನೋಡ್‌ಗಳಿಂದ ಹೋಗುತ್ತದೆ. ಆದ್ದರಿಂದ ಇದು ಸಾಮಾನ್ಯ ಬ್ರೌಸಿಂಗ್‌ಗಿಂತ ನಿಧಾನವಾಗಲಿದೆ.
  • .onion ಸೈಟ್‌ಗಳು: ಇವು ಬ್ರೌಸರ್‌ನಲ್ಲಿ ಇಂಡೆಕ್ಸ್ ಆಗದ ಕಾರಣ ನೀವು ನೇರವಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. onion directoriesನಲ್ಲಿ ವಿಭಾಗಗಳಾಗಿ ವಿಂಗಡಿಸಿದ ಇನ್ನಿತರ .onion ಸೈಟ್‌ಗಳನ್ನು ಕಾಣಬಹುದು.
  • VPN ಜೊತೆಗೆ TOR ಬಳಸಿ: ನೀವಿರುವಲ್ಲಿ TOR ಬಳಕೆಯನ್ನು ನಿರ್ಬಂಧಿಸಿದ್ದರೆ, ಮೊದಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗೆ(VPN) ಸಂಪರ್ಕಿಸಿ ನಂತರ TOR ಅನ್ನು ತೆರೆದರೆ ಅದು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಇದು ಇನ್ನೊಂದು ರಕ್ಷಣಾ ಪದರವಾಗಿ ನಿಮ್ಮ ಇಂಟರ್ನೆಟ್ ಕೊಡುವ ಕಂಪನಿಗೂ ನೀವು TOR ಉಪಯೋಗಿಸುತ್ತಿರುವುದನ್ನು ಗೊತ್ತಾಗದಂತೆ ಮಾಡುತ್ತದೆ.
  • VPNಗೆ ಪರ್ಯಾಯವಾಗಿ TOR: VPN ನಿಮ್ಮನ್ನು ಬೇರೆ ಸರ್ವರ್‌ಗೆ ಸಂಪರ್ಕಿಸಿ ಐಪಿಯನ್ನು ಮರೆಮಾಚಿ, ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಕಾರ್ಯನಿರ್ವಹಿಸಿದರೆ, ಟಾರ್ ನಿಮ್ಮ ಡೇಟಾವನ್ನು ಟಾರ್ ನೆಟ್‌ವರ್ಕ್‌ನಲ್ಲಿರುವ ಅನೇಕ ನೋಡ್‌ಗಳ ಮೂಲಕ ಸಂಪರ್ಕಿಸಿ ನಿಮ್ಮ ಸ್ಥಳ ಮತ್ತು ಐಪಿಯನ್ನು ಮರೆಮಾಚುತ್ತದೆ.

ನಿಮ್ಮಲ್ಲಿ VPN ಚಂದಾದಾರಿಕೆ ಇಲ್ಲದಿದ್ದರೆ ಅಥವಾ ಉಚಿತವಾಗಿರುವುದನ್ನು ಬಳಸಲು ಬಯಸದಿದ್ದರೆ, TOR ಬ್ರೌಸರ್ VPNಗೆ ಉತ್ತಮ ಪರ್ಯಾಯವಾಗಬಹುದು.

ಕೊನೆಯಲ್ಲಿ,

TOR ಸಾಮಾನ್ಯ ಬ್ರೌಸಿಂಗ್‌ಗಿಂತ ಭಿನ್ನವಾಗಿಲ್ಲ, ಆದರೆ ನೀವು ಬ್ರೌಸ್ ಮಾಡುವಾಗ ನಿಮಗೆ ಹೆಚ್ಚಿನ ಗೌಪ್ಯತೆ ಕೊಡುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹುಡುಕಿದ ಉತ್ಪನ್ನಗಳನ್ನು ಜಾಹಿರಾತಾಗಿ ತೋರಿಸಿ ತೊಂದರೆಕೊಡುವುದಿಲ್ಲ.

ಮೊದಲೇ ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ – ಭಾರತದಲ್ಲಿ ಟಾರ್ ಕಾನೂನುಬಾಹಿರವೇ? ಇಲ್ಲ. TOR ಬಳಕೆಯ ವಿರುದ್ಧ ಅಂತಹ ಯಾವುದೇ ಕಾನೂನು ಇಲ್ಲ. ಆದರೆ ಬಳಕೆದಾರರ ಚಟುವಟಿಕೆಗಳು ಅನುಮಾನಾಸ್ಪದವಾಗಿ ಕಂಡುಬಂದರೆ ತನಿಖೆ ನಡೆಸಲು ನಿಮ್ಮ ಡೇಟಾ ಕೇಳುವ ಹಕ್ಕನ್ನು ಸರ್ಕಾರ ಹೊಂದಿದೆ.

ಅದ್ದರಿಂದ ನೀವು ಡೀಪ್ ವೆಬ್‌ ಅಥವಾ ಡಾರ್ಕ್ ವೆಬ್‌ನಲ್ಲಿರುವ ಬೇಡವಾದುದನ್ನು ನಿರ್ಲಕ್ಷಿಸಿ, TOR ಅನ್ನು ನಿಮ್ಮ ಗೌಪ್ಯತೆಗೆ ಮತ್ತು ಈಗಿರುವ ಮಾಧ್ಯಮಗಳಲ್ಲಿ ಲಭ್ಯವಾಗದ ಮಾಹಿತಿಯನ್ನು ಪಡೆಯಲು ಬಳಸಬಹುದು.